ಕಾರ್ಕಳ, ಏ. 12 (DaijiworldNews/TA): ಬೈಲೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಪರಶುರಾಮ ಥೀಮ್ ಪಾರ್ಕ್ ಪರಿಸರದ ಉಮಿಕಲ್ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ.


ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ ಹಠಾತ್ತನೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಸುತ್ತಮುತ್ತಲಿನ ಮರ-ಗಿಡಗಳು ಹಾಗೂ ಒಣಗಿದ ಪೊದೆಗಳು ಬೆಂಕಿಗೆ ಆಹುತಿಯಾಗಿವೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದಾಗಿ ತಿಳಿದುಬಂದಿದೆ. ಆದರೆ, ಬೆಂಕಿ ಥೀಮ್ ಪಾರ್ಕ್ನ ಮುಖ್ಯ ಆವರಣಕ್ಕೆ ವ್ಯಾಪಿಸದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಕಟ್ಟಡ ಹಾನಿ ಸಂಭವಿಸಿಲ್ಲ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡರು. ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಶ್ ಅವರ ನೇತೃತ್ವದಲ್ಲಿ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಹರಿಶ್ಚಂದ್ರ ಶೆಟ್ಟಿಗಾರ್, ಅಚ್ಯುತ ಕರ್ಕೇರ, ಹರೀಶ್ ಮತ್ತು ಬಸವರಾಜ್ ಅವರು ಶ್ರಮಪಟ್ಟು ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ದಳದ ಸಮಯೋಚಿತ ಕ್ರಮದಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.