ಮಂಗಳೂರು, ಏ. 16 (DaijiworldNews/TA): ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (MGNVP) 2ನೇ ಹಂತದ ಯೋಜನೆಯಡಿ ರಾಜ್ಯ ಸರಕಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ 165 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಎ. 18ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಎ.18ರಂದು ಮರವೂರು ಸೇತುವೆ ಬಳಿ 3 ಕೋಟಿ ರೂ. ವೆಚ್ಚದ ಕಾಮಗಾರಿ, ವೆಲೆನ್ಸಿಯಾ ಚರ್ಚ್ ಬಳಿ 1.95 ಕೋಟಿ ರೂ. ವೆಚ್ಚದ ಕಾಮಗಾರಿ, ಚಿಲಿಂಬಿಗುಡ್ಡೆ ಬಳಿ 2 ಕೋಟಿ ರೂ. ವೆಚ್ಚ ಹಾಗೂ ಸುಂಕದಕಟ್ಟೆ ಉರ್ವಾಸ್ಟೋರ್ ಬಳಿ ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವರು. ಮಂಗಳೂರು ನಗರ ಪಾಲಿಕೆಯಲ್ಲೂ ಈಗಾಗಲೇ ಕೆಲವು ಕಾಮಗಾರಿಗಳು ಆರಂಭಗೊಂಡಿವೆ. ಅಧಿಕೃತ ಸಮಾರಂಭವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಶನಿವಾರ ನಡೆಯಲಿದೆ ಎಂದು ಐವನ್ ತಿಳಿಸಿದರು.
ವಾಟರ್ ಫ್ರಂಟ್ ವಾಯು ವಿಹಾರ ಸಂಪರ್ಕ ಕಲ್ಪಿಸುವ ಬೋಳಾರ ಸೀ ಫೇಸ್ ಇನ್ ಫ್ರಂಟ್ ರಸ್ತೆ, ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆ, ಲೋಬೋ ರಿವರ್ ರಸ್ತೆ, ಟಿವಿಎಸ್ ಫ್ಯಾಕಟಿ ರಸ್ತೆ, ಕೆನರಾ ಫ್ಲೈ ವುಡ್ ರಸ್ತೆ ಹಾಗೂ 60ನೇ ಬೆಂಗ್ರೆ ವಾರ್ಡ್ ನ ರಸ್ತೆಗಳಿಗೆ 5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ಅಳವಡಿಕೆ ಸೇರಿದಂತೆ ಒಟ್ಟು 25 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು.