ಮಂಗಳೂರು, ಏ. 17 (DaijiworldNews/AA): ನಗರದ ಪೊಲೀಸ್ ಕಮಿಷನರ್ ಕಚೇರಿ ಮುಂದೆ 2017ರಲ್ಲಿ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಎಲ್ಲಾ 101 ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

2017ರ ಏಪ್ರಿಲ್ ೪ರಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಹ್ಮದ್ ಖುರೇಷಿ ಎಂಬ ವ್ಯಕ್ತಿಯನ್ನು ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸದೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯು ಉದ್ವಿಗ್ನಗೊಂಡಾಗ, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಲ್ಲು ತೂರಾಟ ಮತ್ತು ಗಲಭೆ ನಡೆಸಿದ ಆರೋಪದಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ಒಟ್ಟು 101 ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿ ಅಂತಿಮ ವರದಿ ಸಲ್ಲಿಸಲಾಗಿತ್ತು.
ಎರಡು ಪ್ರಕರಣಗಳ ವಿಚಾರಣೆ ಎರಡನೇ JMFC ನ್ಯಾಯಾಲಯದಲ್ಲಿ ನಡೆದರೆ, ಮೂರನೇ ಪ್ರಕರಣದ ವಿಚಾರಣೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು. ಸುದೀರ್ಘ ವಿಚಾರಣೆಯ ನಂತರ, ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ವ್ಯಕ್ತಿಗಳನ್ನು ಖಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ಸಂಸ್ಥೆಯ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರೆಹಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮುಹಮ್ಮದ್ ಆದಿಲ್, ನಿಶಾನ್ ಎಂ.ಕೆ., ರುಬೀನಾ ಮತ್ತು ಅಂಸೀನಾ ವಾದ ಮಂಡಿಸಿದ್ದರು.