ಪುತ್ತೂರು, ಏ. 18 (DaijiworldNews/AA): ಡಿವೈಡರ್ಗೆ ಅಳವಡಿಸಿದ್ದ ಲೈಟ್ ಕಂಬಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟು ಡಿವೈಡರ್ನ ಇನ್ನೊಂದು ಬದಿಯಿಂದ ಬರುತ್ತಿದ್ದ ಮತ್ತೊಂದು ಬೈಕ್ನ ಸವಾರ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಪುತ್ತೂರು ಹೊರವಲಯದ ಪಡೀಲ್ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.


ಮೃತರನ್ನು ಬೆಳ್ಳಿಪ್ಪಾಡಿ ಗ್ರಾಮದ ಕೊಡಿನೀರು ಬಳಿ ನಿವಾಸಿ ಎಂದು ಗುರುತಿಸಲಾಗಿದೆ
ಪ್ರಾಥಮಿಕ ಮಾಹಿತಿ ಪ್ರಕಾರ, ಪುತ್ತೂರಿನಿಂದ ದಾರಂದಕುಕ್ಕಿನಡೆಗೆ ತೆರಳುತ್ತಿದ್ದ ಬೈಕ್, ಪಡೀಲ್ ಜಂಕ್ಷನ್ನಿಂದ ಸ್ವಲ್ಪ ದೂರದಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲಿದ್ದ ಲೈಟ್ ಕಂಬಕ್ಕೆ ಅಪ್ಪಳಿಸಿದೆ. ಇದೇ ವೇಳೆ ಡಿವೈಡರ್ನ ಇನ್ನೊಂದು ಬದಿಯಿಂದ ಬರುತ್ತಿದ್ದ ಮತ್ತೊಂದು ಬೈಕ್ಗೆ ಢಿಕ್ಕಿ ಹೊಡೆದಿದ್ದು, ಆ ಬೈಕ್ ಸಹ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್, ಆ ಬೈಕ್ನ ಸವಾರ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪುತ್ತೂರಿನಿಂದ ತೆರಳುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇನ್ನೊಂದು ಮೂಲದ ಪ್ರಕಾರ, ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್ ರಾಂಗ್ ಸೈಡ್ನಲ್ಲಿ ಬಂದ ಕಾರಣ, ಅದನ್ನು ತಪ್ಪಿಸಲು ಹೋಗಿ ಪುತ್ತೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಅಪಘಾತ ಸಂಭವಿಸಿದಾಗ ರಸ್ತೆಯಲ್ಲಿ ಭಾರಿ ಧೂಳು ಎದ್ದಿದೆ. ಹೀಗಾಗಿ ಸ್ಥಳದಲ್ಲಿದ್ದವರಿಗೆ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪುತ್ತೂರು ಸಂಚಾರಿ ಠಾಣೆ ಎಸೈ ಸುಹಾಸ್ ಮತ್ತು ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಪಕ್ಕದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಕೂಡ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.