ಕಾರ್ಕಳ, ಏ. 20 (DaijiworldNews/AA): ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳನೊಬ್ಬ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಘಟನೆ ಕಾರ್ಕಳ ಕಸಬಾ ಗ್ರಾಮದ ಆನಂದ ನಗರದಲ್ಲಿ ಏಪ್ರಿಲ್ 19ರ ಮುಂಜಾನೆ ನಡೆದಿದೆ.

ಆನಂದ ನಗರದ 'ಸ್ಟಾರ್ ಕೇಬಲ್ ನೆಟ್ವರ್ಕ್' ಸಮೀಪದ ಕರಿಯಕಲ್ಲು ನಿವಾಸಿ ಹರೀಶ್ ಶೆಟ್ಟಿ (46) ಎಂಬುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಉಜಿರೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಅವರು ಏಪ್ರಿಲ್ 16ರಂದು ಮನೆಗೆ ಬೀಗ ಹಾಕಿ ಹೋಗಿದ್ದರು. ಏಪ್ರಿಲ್ 19ರಂದು ಬೆಳಿಗ್ಗೆ ಅವರ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿದ ಸಂಬಂಧಿಕರು ಫೋನ್ ಮೂಲಕ ಮಾಹಿತಿ ನೀಡಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಏಪ್ರಿಲ್ 19ರ ಮುಂಜಾನೆ ಕಳ್ಳ ಯಾವುದೋ ಸಾಧನ ಬಳಸಿ ಮನೆಯ ಮುಖ್ಯ ಬಾಗಿಲನ್ನು ತೆರೆದು ಒಳಪ್ರವೇಶಿಸಿದ್ದಾನೆ. ಬಳಿಕ ಮನೆಯೊಳಗಿದ್ದ ಕಪಾಟಿನ ಬೀಗ ಮುರಿದು ಬಟ್ಟೆಬರೆಗಳನ್ನೆಲ್ಲಾ ಜಾಲಾಡಿ ಚೆಲ್ಲಾಪಿಲ್ಲಿ ಮಾಡಿದ್ದಾನೆ. ನಂತರ ಮನೆಯೊಳಗಿದ್ದ ಸ್ಕೂಟರ್ ಕೀಯನ್ನು ಪಡೆದ ಕಳ್ಳ, ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಹರೀಶ್ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.