ಮಂಗಳೂರು, ಏ. 20 (DaijiworldNews/TA): ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಬಿಜೆಪಿಗರೇ, ಈ ದೇಶಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಮತ್ತು ಮುಖ್ಯಮಂತ್ರಿಯನ್ನು ನೀಡಿದ ಪಕ್ಷ ಯಾವುದು ಎಂದು ನೆನಪಿಸಿಕೊಳ್ಳಿ. ಈಗ ನೀವು ತಂದಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಚುನಾವಣಾ ಕಾಲದ ಗಿಮಿಕ್ ಆಗಿದ್ದು, ಮಹಿಳೆಯರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ," ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಾರತದ ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದು ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅಂದು ರಾಜೀವ್ ಗಾಂಧಿಯವರು ಈ ಕ್ರಾಂತಿಕಾರಿ ಮಸೂದೆಯನ್ನು ಮಂಡಿಸಿದಾಗ ರಾಜ್ಯಸಭೆಯಲ್ಲಿ ವಿರೋಧಿಸಿ ಸೋಲಿಸಿದ್ದೇ ಇದೇ ಬಿಜೆಪಿ ನಾಯಕರು. ಅಂದು ಅಡ್ಡಿಪಡಿಸಿದವರೇ ಇಂದು ತಾವೇ ಮಹಿಳಾ ಉದ್ಧಾರಕರು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. "ಬಿಜೆಪಿ ಸರ್ಕಾರ ಮಸೂದೆಯನ್ನು ಪಾಸ್ ಮಾಡಿದೆ, ಆದರೆ ಅದನ್ನು ಜಾರಿಗೆ ತರಲು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಅಡೆತಡೆಗಳನ್ನು ವಿಧಿಸಿದೆ. ಇದು ಮುಂದಿನ ಹಲವು ವರ್ಷಗಳ ಕಾಲ ಮೀಸಲಾತಿ ಸಿಗದಂತೆ ಮಾಡುವ ಸಂಚು.
ಕಾಂಗ್ರೆಸ್ ಸಂಖ್ಯಾಬಲದ ಕೊರತೆಯ ನಡುವೆಯೂ ಮಹಿಳಾ ಹಿತಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗದ ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ಮೌನ ವಹಿಸಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೋಷಿತ ವರ್ಗದ ಮಹಿಳೆಯರಿಗೂ ನ್ಯಾಯ ಸಿಗದಿದ್ದರೆ ಈ ಮೀಸಲಾತಿ ಪೂರ್ಣವಾಗುವುದಿಲ್ಲ. ದುರ್ಬಲ ವರ್ಗದವರನ್ನು ಕೈಬಿಟ್ಟಿರುವುದು ಬಿಜೆಪಿಯ ಮಹಿಳಾ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದರು.