ಮಂಗಳೂರು, ಏ. 20 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ನಾರಿಶಕ್ತಿ ವಂದನ್ ಅಧಿನಿಯಮ’ವು ಕೇವಲ ರಾಜಕೀಯ ಮೀಸಲಾತಿಯಲ್ಲ, ದೇಶದ ಮಾತೃಶಕ್ತಿಗೆ ಸಲ್ಲಿಸಿದ ಗೌರವವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಹೊರಹಾಕಿದೆ ಎಂದು ಆರೋಪಿಸಿದರು. ಕ್ಷೇತ್ರ ಮರುವಿಂಗಡಣೆಯ ಬಳಿಕ ದಕ್ಷಿಣ ಭಾರತದ ಪ್ರಾತಿನಿಧ್ಯ ಕುಸಿಯಲಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ ಅವರು, ಕರ್ನಾಟಕದಲ್ಲಿ ಪ್ರಸ್ತುತ 28 ಲೋಕಸಭಾ ಸ್ಥಾನಗಳು 42ಕ್ಕೆ ಏರಿಕೆಯಾಗಲಿವೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ 25ರಿಂದ 38ಕ್ಕೆ, ತಮಿಳುನಾಡಿನಲ್ಲಿ 39ರಿಂದ 59ಕ್ಕೆ ಏರಿಕೆಯಾಗಲಿದ್ದು, ದಕ್ಷಿಣ ಭಾರತದ ಒಟ್ಟು ಪ್ರಾತಿನಿಧ್ಯ 129ರಿಂದ 195ಕ್ಕೆ ಹೆಚ್ಚಾಗಲಿದೆ.
ಹೀಗಿರುವಾಗ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ ಎನ್ನುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಸೂದೆ ಪ್ರತಿಯನ್ನು ಸುಟ್ಟಿರುವುದು ಮಹಿಳೆಯರ ಹಕ್ಕಿಗೆ ಅವಮಾನವಾಗಿದೆ ಎಂದು ಟೀಕಿಸಿದ ಅವರು, ದಕ್ಷಿಣದ ಧ್ವನಿ ಕುಂಠಿತಗೊಳ್ಳುತ್ತದೆ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳು ಜನರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ಆರೋಪಿಸಿದ್ದಾರೆ.