ಉಡುಪಿ, ಏ. 21 (DaijiworldNews/TA): ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಸೋಮವಾರ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದ ಕಾಲೇಜು ಮೈದಾನದಲ್ಲಿ ನಡೆದ ಪವಿತ್ರ ಸಮಾರಂಭದಲ್ಲಿ ಅಭಿಷಿಕ್ತಗೊಳಿಸಿ ಪೀಠಾರೋಹಣಗೊಳಿಸಲಾಯಿತು.



































ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರು ಮುಖ್ಯ ಅಭಿಷೇಕಕರಾಗಿ ಧರ್ಮಾಧ್ಯಕ್ಷರ ಅಭಿಷೇಕದ ವಿಧಿ ವಿಧಾನ ನೆರವೇರಿಸಿದರು. ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿ ಭಾಗವಹಿಸಿದರು. ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋ ಪೋಲ್ಡೊ ಗಿರೆಲ್ಲಿ, 30ಕ್ಕೂ ಹೆಚ್ಚು ಧರ್ಮಾಧ್ಯಕ್ಷರು, 300 ಧರ್ಮಗುರುಗಳು, ಅಷ್ಟೇ ಸಂಖ್ಯೆಯ ಧರ್ಮಭಗಿನಿಯರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6,000 ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಧರ್ಮಾಧ್ಯಕ್ಷರ ಅಭಿಷೇಕ ವಿಧಿಯಲ್ಲಿ ಪೋಪ್ ಅವರ ಅಧಿಕೃತ ನೇಮಕಾತಿ ಪತ್ರವನ್ನು ವಾಚಿಸಲಾಯಿತು. ನಂತರ ಪವಿತ್ರ ಧಾರ್ಮಿಕ ವಿಧಿಗಳೊಂದಿಗೆ ಧರ್ಮಾಧ್ಯಕ್ಷರ ಅಭಿಷೇಕ ನೆರವೇರಿತು. ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ನೂತನ ಧರ್ಮಾಧ್ಯಕ್ಷ ಅತೀ ವಂ|ಡಾ|ಲೆಸ್ಲಿ ಡಿಸೋಜಾ ಮಾತನಾಡಿ ದೇವರಿಗೆ, ತಮ್ಮ ಕುಟುಂಬಕ್ಕೆ, ಗುರುಗಳಿಗೆ ಹಾಗೂ ಭಕ್ತರಿಗೆ ಆಳವಾದ ಕೃತಜ್ಞತೆ ಸಲ್ಲಿಸಿದರು. ಮುಂದಿರುವ ಸವಾಲುಗಳನ್ನು ವಿನಯದಿಂದ ಒಪ್ಪಿಕೊಂಡ ಅವರು ದೈವಿಕ ಕೃಪೆಯ ಮೇಲೆ ನಂಬಿಕೆ ವ್ಯಕ್ತಪಡಿಸಿದರು.
ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಸ್ಟೀವನ್ ಡಿ’ಸೋಜಾ, ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ , ಉಡುಪಿ ಶಾಸಕ ಯಶಪಾಲ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಮಾಜಿ ಶಾಸಕರಾದ ರಘುಪತಿ ಭಟ್, ಜೆ ಆರ್ ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಮ್ ಎ ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಸಹಿತ ಹಲವು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.