ಮಂಗಳೂರು,ಏ. 21 (DaijiworldNews/AK): ಕುಳೂರು ಸೇತುವೆ ಕಾಮಗಾರಿಯ ಗಡುವು ಪದೇ ಪದೇ ಮುಂದೂಡಲ್ಪಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ನವೆಂಬರ್ನಲ್ಲಿ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ 'ದಿಶಾ' ಸಭೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು NHAI ಯೋಜನಾ ನಿರ್ದೇಶಕರು ಭರವಸೆ ನೀಡಿದ್ದರು. ಆದರೆ, ಇದೀಗ ತಮ್ಮ ಮಾತಿನಿಂದ ಹಿಂದೆ ಸರಿದಿರುವ ಅಧಿಕಾರಿಗಳು, ಕಾಮಗಾರಿ ಮುಕ್ತಾಯಕ್ಕೆ ಜೂನ್ ತಿಂಗಳವರೆಗೆ ಕಾಲಾವಕಾಶ ಬೇಕೆಂದು ಹೊಸ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಅಧಿಕಾರಿಗಳ ಈ ಉತ್ತರವನ್ನ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ನೀವು ಕೇವಲ ಕಂಟ್ರಾಕ್ಟರ್ ನೀಡುವ ಮಾಹಿತಿಯನ್ನು ನಮಗೆ ನೀಡಬೇಡಿ; ವಾಸ್ತವ ಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ಗಡುವನ್ನು ನಿಗದಿಪಡಿಸಿ ಎಂದು ಎಚ್ಚರಿಸಿದ್ದಾರೆ. ಪದೇ ಪದೇ ದಿನಾಂಕಗಳನ್ನು ಬದಲಿಸುವುದರಿಂದ ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುತ್ತಾರೆ ಮತ್ತು ನಮಗೆ ಉತ್ತರಿಸಲು ಕಷ್ಟವಾಗುತ್ತದೆ ಎಂದು ಹೇಳಿದ ಅವರು, ಸುಳ್ಳು ಭರವಸೆಗಳನ್ನು ನೀಡದೆ ಜವಾಬ್ದಾರಿಯುತವಾಗಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ದಕ್ಷಿಣ ಕನ್ನಡದ ಅತ್ಯಂತ ಅಗತ್ಯವಾದ ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ಸಾವಿರಾರು ವಾಹನಗಳು ಟ್ರಾಫಿಕ್ ಜಾಲದಲ್ಲಿ ಸಿಲುಕಿ ನರಳುತ್ತಿವೆ. ಅಧಿಕಾರಿಗಳ ಈ 'ಗಡುವು ಮುಂದೂಡುವ ಆಟ' ಮಳೆಗಾಲದವರೆಗೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಇನ್ನಾದರೂ ಕಾರಣ ಹೇಳುವುದನ್ನು ಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮುಗಿಸುತ್ತಾರಾ ಎಂದು ಕಾದು ನೋಡಬೇಕಿದೆ.