ಸುಳ್ಯ, ಏ. 22 (DaijiworldNews/TA): ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ವಿವಿಧ ಸಾಂಸ್ಕೃತಿಕ ,ವೈದಿಕ ಕಾರ್ಯಕ್ರಮಗಳ ಮೂಲಕ ವೈಭಯುತವಾಗಿ ಏ.20ರಂದು ಜಾತ್ರೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.

ಏ.19ರಂದು ಬೆಳಿಗ್ಗೆ ಆರಾಟ ಬಾಗಿಲು ತೆರೆಯಲಾಯಿತು. ರಾತ್ರಿ ಉತ್ಸವ ಬಲಿ ನಡೆದು ದೇವರಿಗೆ ವಸಂತ ಮಟ್ಟದಲ್ಲಿ ಹಾಗೂ ಕಟ್ಟೆಯಲ್ಲಿ ಪೂಜೆಯಾಗಿ ಜಳಕ್ಕೆ ತೆರಳಿದರು. ಜಳಕವಾಗಿ ದೇವರು ಬಂದ ಬಳಿಕ ದರ್ಶನ ಬಲಿಯಾಗಿ ಬಟ್ಟಲು ಕಾಣಿಕೆಯಾಗಿ ಧ್ವಜಾಅವರೋಹಣ ನಡೆದು ಸಂಪ್ರೋಕ್ಷಣೆ ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಕೊನೆಗೊಂಡಿತು. ಸುಮಾರು ಎರಡು ತಿಂಗಳ ಹಿಂದೆ ಸುಳ್ಯ ಸೀಮೆಯ 18 ಗ್ರಾಮಗಳಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೆ ಹಸಿರುವಾಣಿ ಸಂಗ್ರಹದ ಬಗ್ಗೆ ಜಾತ್ರೋತ್ಸವ ಸಮಿತಿ ನೇತ್ರತ್ವದಲ್ಲಿ ಸಭೆ ನಡೆಸಿ ಪೂರ್ವ ತಯಾರಿ ನಡೆಸಲಾಗಿತ್ತು.ಇದರಿಂದ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ.
ಈ ಸಂದರ್ಭಗಳಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಸೇರಿದಂತೆ ಸೀಮೆಯವರು, ಭಕ್ತರು ಉಪಸ್ಥಿತರಿದ್ದರು.