ಪುತ್ತೂರು, ಏ. 22 (DaijiworldNews/TA): ನಗರದ ಪೇಟೆಯಲ್ಲಿರುವ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಪುತ್ತೂರು ನರಿಮೊಗರು ನಿವಾಸಿ ಹರ್ಷ ಗೋಪಾಲ್ ಹಾಗೂ ಕಬಕ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 20 ರಂದು ರಾತ್ರಿ ವೇಳೆ ದೇವಸ್ಥಾನದ ಜಾತ್ರಾ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ದೇವಸ್ಥಾನದ ಕಛೇರಿಯ ಬಳಿ ಜನರು ಗುಂಪು ಸೇರಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಗಲಾಟೆ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ.
ಪೊಲೀಸರು ಗಲಾಟೆ ನಡೆಸದಂತೆ ಎಚ್ಚರಿಕೆ ಮತ್ತು ತಿಳುವಳಿಕೆ ನೀಡಿದರೂ ಸಹ, ಅದನ್ನು ಲೆಕ್ಕಿಸದೆ ಅವರು ಗಲಾಟೆಯನ್ನು ಮುಂದುವರಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.