ಮಂಗಳೂರು, ಏ. 22 (DaijiworldNews/AA): 9ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ತಾಲೂಕು ಮಟ್ಟದ ನಿರ್ವಹಣಾ ಸಮಿತಿ ಸಭೆಯು ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮಂಗಳೂರು ತಾಲೂಕು ಪಂಚಾಯತ್ ನಲ್ಲಿ ಜರುಗಿತು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ 9ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ದ.ಕ ಜಿಲ್ಲೆಯಾದ್ಯಂತ ಏಪ್ರಿ 23 ರಿಂದ ಮೇ 22ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರತೀ ಬಾರಿಯಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೆ.ಎಂ.ಎಫ್ನ ಲಸಿಕೆದಾರರು ಹಾಗೂ ಪಶುಸಖಿಯರು ನಿಮ್ಮ ಗ್ರಾಮಗಳಿಗೆ ಆಗಮಿಸಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ.
ಪ್ರಸ್ತುತ ಮಂಗಳೂರು ತಾಲೂಕಿನಲ್ಲಿ 12545 ದನ, ಹಾಗೂ 42 ಎಮ್ಮೆ ಒಟ್ಟು 12587 ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗದ ಲಸಿಕೆ ಹಾಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸರ್ವಸನ್ನದ್ದವಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಪಶುಪಾಲನಾ ಇಲಾಖೆಯ ಮಂಗಳೂರು ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಅಶೋಕ್ ಕೆ. ಆರ್ ಹಾಗೂ ಇತರ ಸಮಿತಿಯ ಸದಸ್ಯರುಗಳಾದ ತಾಲೂಕು ಆರೋಗ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ನಗರ ಮತ್ತು ಮಂಗಳೂರು ದಕ್ಷಿಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಗ್ರಾಮಾಂತರ ಮತ್ತು ಸಹ ವ್ಯವಸ್ಥಾಪಕರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ ಹಾಗೂ ಮಂಗಳೂರು ತಾಲೂಕಿನ ಪಶುವೈದ್ಯಾಧಿಕಾರಿಗಳು ಮತ್ತು ತಾಲೂಕು ಪಂಚಾಯತ್ ಯೋಜನಾಧಿಕಾರಿ ಅವರು ಉಪಸ್ಥಿತರಿದ್ದರು.