ಮಂಗಳೂರು, ಏ. 23 (DaijiworldNews/TA): ಮಹಿಳೆಯರ ಸಬಲೀಕರಣ ಸಮಾನತೆ ಹಾಗೂ ನ್ಯಾಯದ ಕುರಿತು ಜಾಗೃತಿ ಮೂಡಿಸಲು ನಾರಿ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಜನಜಾಗೃತಿ ಸಭೆ ನಡೆಯಿತು.


ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಿರೋಧ ಪಕ್ಷಗಳು ಮಹಿಳಾ ವಿರೋಧಿ ಮನಃಸ್ಥಿತಿಯನ್ನು ಹೊಂದಿವೆ. ಹೀಗಾಗಿ ನಾರಿಶಕ್ತಿ ವಂದನ ಮಸೂದೆ ಪರವಾಗಿ ನಿಂತಿಲ್ಲ. ಈ ಮಸೂದೆಯನ್ನು ಸೋಲಿಸುವ ಮೂಲಕ ವಿಪಕ್ಷಗಳು ಸಮಾಜದ ನಂಬಿಕೆಯನ್ನು ಕಳೆದುಕೊಂಡಿವೆ ಎಂದರು. ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎಂದು ತೋರಿಸುವ ನಿಟ್ಟಿನಲ್ಲಿ, ಮಸೂದೆ ಪರವಾಗಿ ವಿಧಾನಸೌಧ, ಸಂಸತ್ತಿನಲ್ಲಿಯೂ ಪ್ರತಿಭಟನೆ ನಡೆಸಲು ನಾವು ಸಿದ್ದರಾಗಿದ್ದೇವೆ. ಮಹಿಳೆಯರು ಸಬಲರಾಗಲು ವಿರೋಧ ಪಕ್ಷದವರಿಗೆ ಸಹಮತ ಇಲ್ಲ. ಶೇ.33ರಷ್ಟು ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ, ಪುರುಷರು ಮೂಲೆಗುಂಪಾಗುತ್ತಾರೆ ಎಂಬ ಭಯ ಅವರಲ್ಲಿ ಹುಟ್ಟಿದೆ. ಈ ಮಸೂದೆ ಅಂಗೀಕಾರ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ವಕೀಲೆ ಸಹನಾ ಕುಂದರ್ ಮಾತನಾಡಿ, ಕಳೆದ ಶುಕ್ರವಾರ ದೇಶಕ್ಕೆ ಕರಾಳ ದಿನ. ಅದೆಷ್ಟೋ ಮಹಿಳೆಯರ ಆಸೆಯನ್ನು ವಿರೋಧ ಪಕ್ಷಗಳು ನಿರಾಸೆಗೊಳಿಸಿವೆ. ಇದು ಈ ದೇಶದ 71 ಕೋಟಿ ಮಹಿಳೆಯರಿಗೆ ಆಗಿರುವ ಸೋಲು, ವಿಪಕ್ಷಗಳು ಮಹಿಳೆಯರಿಗೆ ಮಾಡಿರುವ ಅವಮಾನ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ದೇಶವನ್ನು ಆಳುವ ಶಕ್ತಿ ಮಹಿಳೆಗಿದೆ. ಆದರೆ, ಆಕೆಯನ್ನು ಸಮಾಜಿಕವಾಗಿ ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು. ಈ ವೇಳೆ ಹಲವು ಮಹಿಳಾ ನಾಯಕರು ಉಪಸ್ಥಿತರಿದ್ದರು.