ಕುಂದಾಪುರ, ಏ. 23 (DaijiworldNews/AA): ಆಜ್ರಿ ಗ್ರಾಮದ ತಗ್ಗುಂಜೆಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಹೆಲ್ಮೆಟ್ ಧರಿಸಿ ಬಂದ ಕಳ್ಳರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಎಂದಿನಂತೆ ನಾಗರಾಜ ಶೆಟ್ಟಿ ಅವರು ಬೆಳಿಗ್ಗೆ ದೇವಸ್ಥಾನದ ಕಚೇರಿಯಿಂದ ಕಾಣಿಕೆ ಡಬ್ಬಿಯನ್ನು ಹೊರತೆಗೆದು ಹೊರಗಿನ ಪ್ರಾಂಗಣದಲ್ಲಿ ಇಟ್ಟಿದ್ದರು. ಅವರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಕಳ್ಳರು ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ. ಸ್ವಚ್ಛತಾ ಕೆಲಸ ಮುಗಿಸಿ ಬಂದು ನೋಡಿದಾಗ ಕಾಣಿಕೆ ಡಬ್ಬಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ.
ಇಬ್ಬರು ಕಳ್ಳರು ಮೊದಲು ಭಕ್ತರಂತೆ ದೇವಸ್ಥಾನಕ್ಕೆ ಬಂದು, ಪ್ರಾರ್ಥನೆ ಸಲ್ಲಿಸಿ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿದ್ದಾರೆ. ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಕಳ್ಳರು ದೇವಸ್ಥಾನದ ಹೊರಗಡೆ ಬಂದಿದ್ದಾರೆ. ಈ ಪೈಕಿ ಹೆಲ್ಮೆಟ್ ಧರಿಸಿದ್ದ ಒಬ್ಬ ಕಳ್ಳ ಕಾಣಿಕೆ ಡಬ್ಬಿಯನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಸಮೀಪದ ಮನೆಯ ನಿವಾಸಿಗಳು ಕೂಗಾಡಿದ ಹಿನ್ನೆಲೆಯಲ್ಲಿ, ಸಿಕ್ಕಿಬೀಳುವ ಭೀತಿಯಿಂದ ಕಳ್ಳರು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕಾಣಿಕೆ ಡಬ್ಬಿಯನ್ನು ಎಸೆದು ಪರಾರಿಯಾಗಿದ್ದಾರೆ.
ಈ ಬಗ್ಗೆ ನಾಗರಾಜ ಶೆಟ್ಟಿ ಅವರು ಪೊಲೀಸ್ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.