ಮಂಗಳೂರು, ಏ. 23 (DaijiworldNews/TA): ಸುರತ್ಕಲ್ ನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ಗಾಗಿ ರಸ್ತೆ ಅಗೆದು ಹಾಕಲಾಗಿದ್ದು, ಗುಂಡಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಇದರಿಂದ ನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿದೆ. ವಾಹನ ಸಂಚಾರ ದಟ್ಟವಾಗಿರುವ ಈ ಭಾಗದಲ್ಲಿ ರಸ್ತೆಯ ಮಧ್ಯದಲ್ಲೇ ನಿರ್ಮಾಣವಾದ ಆಳವಾದ ಗುಂಡಿ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ವಿಶೇಷವಾಗಿ ಬೈಕ್ ಸವಾರರು ಹಾಗೂ ಸಣ್ಣ ವಾಹನಗಳು ಈ ಗುಂಡಿಯನ್ನು ತಪ್ಪಿಸಲು ಯತ್ನಿಸುವ ವೇಳೆ ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಳ್ಳುವ ಘಟನೆಗಳು ಹೆಚ್ಚುತ್ತಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದ್ದು, ಸಮರ್ಪಕ ಬೆಳಕು ಇಲ್ಲದ ಕಾರಣ ಅಪಘಾತಗಳ ಸಂಭವ ಹೆಚ್ಚುತ್ತಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮಾಜಿ ಶಾಸಕ ಮೊಯಿದೀನ್ ಬಾವಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ದುರವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.