ಕುಂದಾಪುರ, ಏ. 25 (DaijiworldNews/TA): ಅಧಿಕಾರಶಾಹಿ ಮನಸ್ಥಿತಿ ವಿಶ್ವದಲ್ಲಿ ಯುದ್ಧ ಭೀತಿಯನ್ನು ಸೃಷ್ಟಿಸಿದೆ. ಪರಿಣಾವಾಗಿ ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಮಾನವ ಜೀವಗಳು ಸಾವನ್ನಪ್ಪುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಪರಿಸರದ ಮೇಲೂ ಮಾರಣಾಂತಿಕ ಹಾನಿಗಳುಂಟಾಗುತ್ತಿದ್ದು ವಿಶ್ವಶಾಂತಿಗಾಗಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ಹೇಳಿದ್ದಾರೆ.






ಅವರು ಶನಿವಾರ ಕುಂದಾಪುರದ ಶಾಸ್ತ್ರೀ ಸರ್ಕಲ್ ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡ ಎರಡನೇ ಹಂತದ ವಿಶ್ವಶಾಂತಿಗಾಗಿ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭ ಅವರು ತನ್ನ ಜೊತೆಗೆ ಮಗುವಿನ ರೂಪಕವನ್ನೂ ಪ್ರತಿಭಟನೆಯಲ್ಲಿ ಪ್ರತಿಬಿಂಬಿಸಿ, ಯುದ್ಧದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳೂ ಗಂಭೀರವಾಗುತ್ತಿದ್ದು, ಅದನ್ನು ತಪ್ಪಿಸಿ ಶಾಂತಿ ನೆಲೆಸುವಲ್ಲಿ ನಾವೆಲ್ಲರೂ ಹೋರಾಡಬೇಕು ಎಂದು ಹೇಳಿದರು.
ಪ್ರತಿಭಟನೆಗೆ ಮುನ್ನ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು ಯುದ್ಧದಲ್ಲಿ ಮಡಿದವರಿಗೆ ಮೌನವಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಮಾಜೀ ಸಂಸದ ಕೆ ಜಯಪ್ರಕಾಶ್ ಹೆಗ್ಡೆಯವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರಾಮಾಂಜಿಯವರ ನಿಲುವಿಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ, ದಯೆಯೇ ಧರ್ಮದ ಮೂಲವಯ್ಯ, ಬಂದೂಕಿನ ನಳಿಗೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ ಎನ್ನುವ ಸ್ಲೋಗನ್ ಗಳ ಜೊತೆಗೆ ಮಣ್ಣಿನಿಂದ ಮಾಡಿದ ಪುಟ್ಟ ಮಗುವಿನ ಪ್ರತಿಮೆ ಗಮನ ಸೆಳೆಯುತ್ತಿದೆ.