ಕಡಬ, ಏ. 25 (DaijiworldNews/AA): ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಪ್ರರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಕಟವಾದ ಬಳಿಕ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ಅಜ್ಜವರ ನಿವಾಸಿ ಎನ್. ಎಂ. ಅಬ್ದುಲ್ ಅಜೀಜ್ (30) ಬಂಧಿತ ಆರೋಪಿ.
2012ರ ಜನವರಿ 31ರಂದು ಕಡಬ ಠಾಣಾ ವ್ಯಾಪ್ತಿಯ ಪುತ್ತೂರು, ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ, ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ. ಕ್ರ : 15/2012, ಕಲಂ : 302.201 R/W 34 ಐ.ಪಿ.ಸಿ ಪ್ರಕರಣ ದಾಖಲಿಸಿಸಲಾಗಿತ್ತು.
ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಗಳಾಗಿದ್ದ ಎಂ.ಎನ್ ಅನುಚೇತ್ ಐ.ಪಿ.ಎಸ್ ರವರು, ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ, ಆರೋಪಿ ಅಬ್ದುಲ್ ಅಜೀಜ್ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿರುತ್ತಾರೆ. ಈ ಪ್ರಕರಣದ ವಿಚಾರಣೆಯನ್ನು ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ ಪಾಟೀಲ್ ರವರು ನಡೆಸಿರುತ್ತಾರೆ.
ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2,00,000 ರೂ. ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿರುತ್ತದೆ. ಸರ್ಕಾರಿ ಅಭಿಯೋಜಕರಾಗಿದ್ದ ಕೆ.ಪಿ ಯಶೋಧ ರವರು ಮಾನ್ಯ ವಾದಮಂಡಿಸಿರುತ್ತಾರೆ.
ಅಪರಾಧಿಯು ಶಿಕ್ಷೆ ಪ್ರಕಟವಾದ ಬಳಿಕ ದಸ್ತಗಿರಿಗೆ ಸಿಗದೇ, ತಲೆಮರೆಸಿಕೊಂಡಿದ್ದನು. ಇದೀಗ ಆತನನ್ನು ಕಡಬ ಪೊಲೀಸ್ ಉಪನೀರಿಕ್ಷಕರಾದ ಜಂಬುರಾಜ್ ಮಹಾಜನ್ ಮತ್ತು ಠಾಣಾ ಸಿಬ್ಬಂದಿಗಳು ಆಂಧ್ರಪ್ರದೇಶದಲ್ಲಿ ದಸ್ತಗಿರಿ ಮಾಡಿ ಏ.25 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.