ಕುಂದಾಪುರ, ಏ. 26 (DaijiworldNews/TA): ಆರು ತಿಂಗಳ ಹಿಂದೆ ಇಟ್ಟ ಬೋನಿಗೆ ಹೆಣ್ಣು ಚಿರತೆಯೊಂದು ಬಿದ್ದ ಘಟನೆ ಕುಂದಾಪುರದ ಉಳ್ಳೂರು - 74 ಗ್ರಾಮದ ಯಡಹಕ್ಲು ಎಂಬಲ್ಲಿ ಸಂಭವಿಸಿದೆ.

ಯಡಹಕ್ಲು ಪರಿಸರದಲ್ಲಿ ಸುಮಾರು 2 - 3 ಚಿರತೆಗಳು ರಾತ್ರಿ ವೇಳೆ ಸಂಚರಿಸುತ್ತಾ ಜನರಲ್ಲಿ ಆತಂಕ ಉಂಟು ಮಾಡಿದ್ದವು. ಸ್ಥಳೀಯ ನಿವಾಸಿ ರತ್ನಾಕರ ನಾಯ್ಕ ಅವರ 5 - 6 ಕೋಳಿಗಳು ಮತ್ತು ಸಾಕು ನಾಯಿಗಳು ಚಿರತೆ ಪಾಲಾಗಿದ್ದವು. ಅವರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ತನ್ನ ಮನೆಯ ಅಂಗಳದ ಕೋಳಿ ಗೂಡಿನ ಪಕ್ಕದಲ್ಲೇ ಆರು ತಿಂಗಳ ಹಿಂದೆ ಬೋನನ್ನು ಇರಿಸಿದ್ದರು.
ಶುಕ್ರವಾರ ರಾತ್ರಿ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾರ್ಯಾ ಚರಣೆಯಲ್ಲಿ ಶಂಕರನಾರಾಯಣ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ವನರಕ್ಷಕರಾದ ಜಾಹಿರ್ಅಬ್ಟಾಸ್, ಕೃಷ್ಣಮೂರ್ತಿ, ರವಿ, ಉಳ್ಳೂರು ಗ್ರಾಮ ಅರಣ್ಯ ಸಮಿತಿ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ, ರತ್ನಾಕರ ನಾಯ್ಕ, ಜಯರಾಮ ನಾಯ್ಕ, ರಾಜೇಶ್ ಹೆಬ್ಟಾರ್, ನಾಗೇಂದ್ರ ಆಚಾರ್ ವೊದಲಾದವರು ಪಾಲ್ಗೊಂಡರು.