ಮಂಗಳೂರು, ಏ. 26 (DaijiworldNews/TA): ಚಿತ್ತಾರ ಕಲೆಯು ಸಂಸ್ಕೃತಿ, ಸಂಪ್ರದಾಯ ಹಾಗೂ ಪ್ರಕೃತಿಯೊಂದಿಗಿನ ನಂಟನ್ನು ಪ್ರತಿಬಿಂಬಿಸುವ ಅತಿ ಸುಂದರ ಜನಪದ ಕಲೆಯಾಗಿದೆ. ಕರ್ನಾಟಕದ ಈ ಪರಂಪರೆಯ ಕಲೆ ಇಂದಿನ ಕಾಲದಲ್ಲಿ ನಿಧಾನವಾಗಿ ಮರೆಯಾಗುತ್ತಿದ್ದು ಈಗ ನೋಡಲು ಅಪರೂಪವಾಗುತ್ತಿದೆ. ಆದರೆ ಚಿತ್ತಾರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಂಗಳೂರಿನ ಉರ್ವಾದ ಸಂತ ಅಲೋಸಿಯಸ್ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಒಟ್ಟಿಗೆ ಸೇರಿಕೊಂಡು ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಶಾಲೆಯ ಆವರಣದ ಮುಂಭಾಗದಲ್ಲಿರುವ ಗೋಡೆಯ ಮೇಲೆ ಚಿತ್ತಾರ ಹಾಗೂ ವರ್ಲಿ ಕಲೆಯನ್ನು ಅತ್ಯಂತ ಸೊಗಸಾಗಿ ಚಿತ್ರಿಸುವ ಮೂಲಕ ಕಲೆಗೆ ಜೀವ ತುಂಬುವ ಕಾರ್ಯ ನಡೆಸುತ್ತಿದ್ದಾರೆ.


ಈ ಕಲೆಯ ವಿಶೇಷತೆ ಎಂದರೆ ಜ್ಯಾಮಿತೀಯ ಆಕೃತಿಗಳ ಬಳಕೆ ವೃತ್ತ, ತ್ರಿಭುಜ, ಚೌಕ ಮುಂತಾದ ಸರಳ ಆಕಾರಗಳನ್ನು ಬಳಸಿ ಅಂದವಾದ ಹಾಗೂ ಆಕರ್ಷಕ ವಿನ್ಯಾಸಗಳನ್ನು ರಚಿಸುವುದು. ಜೊತೆಗೆ ಪ್ರಕೃತಿ, ಹೂವುಗಳು, ಜೀವಜಾಲ ಮತ್ತು ದೈನಂದಿನ ಜೀವನದ ದೃಶ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುವುದು ಇದರ ಮುಖ್ಯ ಲಕ್ಷಣವಾಗಿದೆ. ಈ ಮರೆಯಾಗುತ್ತಿರುವ ಕಲೆಗೆ ಮರುಜೀವ ನೀಡುವ ಉದ್ದೇಶದಿಂದ ಉರ್ವಾದ ಸಂತ ಅಲೋಸಿಯಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಯ ಆವರಣದ ಮುಂಭಾಗದಲ್ಲಿರುವ ಗೋಡೆಯ ಮೇಲೆ ಚಿತ್ತಾರ ಹಾಗೂ ವರ್ಲಿ ಕಲೆಯನ್ನು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ.
ಸದ್ಯ ಈ ಸೃಜನಾತ್ಮಕ ಕೃತಿಗಳು ಎಲ್ಲರ ಗಮನ ಸೆಳೆಯುತ್ತಿದ್ದು ಕಲೆಯ ಬಗ್ಗೆ ಹೊಸ ಆಸಕ್ತಿ ಮೂಡಿಸುತ್ತಿವೆ. ಈ ಕಾರ್ಯಕ್ಕೆ ಶಾಲೆಯ ಸಂಚಾಲಕರಾದ ವಂದನೀಯ ಗುರುಗಳಾದ ಫಾದರ್ ಬೆಂಜಮಿನ್ ಪಿಂಟೋ ಹಾಗೂ ಮುಖ್ಯೋಪಾಧ್ಯಾಯರಾದ ಅಲೋಸಿಯಸ್ ಡಿ’ಸೋಜ ಅವರ ಪೂರ್ಣ ಬೆಂಬಲದೊಂದಿಗೆ ಚಿತ್ರಕಲೆ ಶಿಕ್ಷಕಿ ರಚನಾ ಸೂರಜ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಹೊರಹಾಕಿ ಈ ಸುಂದರ ಕಲಾಕೃತಿಯನ್ನು ರೂಪಿಸಿದ್ದಾರೆ. ಒಟ್ಟಿನಲ್ಲಿ ಮರೆಯಾಗುತ್ತಿರುವ ಚಿತ್ತಾರ ಕಲೆಗೆ ವಿದ್ಯಾರ್ಥಿಗಳು ಮರುಜೀವ ನೀಡುತ್ತಿರುವುದು ಉತ್ತಮ ವಿಚಾರವೇ ಸರಿ. ಇದು ಎಲ್ಲರಿಗೂ ಮಾದರಿಯಾಗಲಿ.