ಮಂಗಳೂರು, ಏ. 29 (DaijiworldNews/TA): ಬಜ್ಪೆ ಕೊಳಂಬೆಯ ತಲಕಳ ಶ್ರೀ ಧರ್ಮಚಾವಡಿಯಲ್ಲಿ ಶ್ರೀ ಮಹಾದೇವ, ಶ್ರೀ ಮಹಾದೇವಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿ ದೈವಗಳ ಸನ್ನಿಧಿಯಲ್ಲಿ ಏಪ್ರಿಲ್ 30 ಮತ್ತು ಮೇ 1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಂಡಿಕಾಯಾಗ ಹಾಗೂ ನೇಮೋತ್ಸವ ಅತ್ಯಂತ ವೈಭವದಿಂದ ನಡೆಯಲಿದೆ.

ಕೀರ್ತಿಶೇಷ ಪೂಜ್ಯ ಶ್ರೀ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಶ್ರೀಪಾದಂಗಳವರ ಪುಣ್ಯ ಸ್ಮರಣೆಯೊಂದಿಗೆ ಈ ಕಾರ್ಯಗಳು ನಡೆಯಲಿವೆ. ಏಪ್ರಿಲ್ 30ರ ಗುರುವಾರ ಬೆಳಿಗ್ಗೆ ವಾಸ್ತು ಶಿಲ್ಪಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಮಹಾದೇವರಿಗೆ ಶುದ್ಧಕಲಶ ಹಾಗೂ ರುದ್ರಾಭಿಷೇಕ ನೆರವೇರಲಿದ್ದು, ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.3೦ಕ್ಕೆ ಸಂತ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ರಾತ್ರಿ 8.3೦ ರಿಂದ 'ಜೈ ಬಜರಂಗ ಬಲಿ' ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಮೇ 1ರ ಶುಕ್ರವಾರ ಮುಂಜಾನೆ 7 ಗಂಟೆಗೆ 'ತಲಕಳ ಶ್ರೀ ಕಾಶೀ ವಿಶ್ವನಾಥೇಶ್ವರ ಭಜನಾ ಮಂಡಳಿ'ಯಿಂದ ಭಜನಾ ಕಾರ್ಯಕ್ರಮ, 7:30ಕ್ಕೆ ದೇವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗಲಿದ್ದು, ಬಳಿಕ 8:30ರಿಂದ ಶ್ರೀ ದೇವಿ ಭಜನಾ ಮಂಡಳಿ ಮುಂಚೂರು ಹಾಗೂ ಕಾಂತಾಬಾರೆ ಬೂದಬಾರೆ ಭಜನಾ ಮಂಡಳಿ ಕೊಳಂಬೆ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 4.00ಕ್ಕೆ ಹುಣ್ಣಿಮೆ ಪೂಜೆ,ಅಣ್ಣಪ್ಪ ಸ್ವಾಮಿಗೆ ಎಣ್ಣೆಬೂಲ್ಯ ಕೊಡುವುದು, ನಂತರ ಅನ್ನಸಂತರ್ಪಣೆ, ರಾತ್ರಿ 9.00ಕ್ಕೆ ನೇಮೋತ್ಸವ ನಡೆಯಲಿದೆ. ಈ ಪುಣ್ಯ ಕಾರ್ಯಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿ, ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.