ಮಂಗಳೂರು, ಮೇ. 03 (DaijiworldNews/AA): ಶನಿವಾರ ಸಂಜೆ ಮಂಗಳೂರಿನ ಮುಲ್ಕಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಿಂದಾಗಿ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.




ಮಂಗಳೂರಿನಿಂದ ಬಳ್ಳಾರಿಯತ್ತ ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್, ಜಂಕ್ಷನ್ನಲ್ಲಿ ಇರಿಸಲಾಗಿದ್ದ ಬ್ಯಾರಿಕೇಡ್ಗಳ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಈ ವೇಳೆ ಕಾಸರಗೋಡಿನಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು, ಟ್ಯಾಂಕರ್ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊದಲ ಅಪಘಾತದ ಬೆನ್ನಲ್ಲೇ, ಮಂಗಳೂರಿನಿಂದ ಉಡುಪಿಯ ಕಡೆಗೆ ಹೋಗುತ್ತಿದ್ದ ಕಾರೊಂದು ಡಿವೈಡರ್ ಬಳಿ ತಿರುವು ಪಡೆಯಲು ಯತ್ನಿಸುತ್ತಿದ್ದಾಗ, ಹಿಂಬದಿಯಿಂದ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಬಲಬದಿಗೆ ಹಾನಿಯಾಗಿದೆ.
ಈ ಸರಣಿ ಅಪಘಾತಗಳಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಪಾವಂಜೆ ದೇವಸ್ಥಾನದವರೆಗೆ ಸಾಲುಗಟ್ಟಿ ನಿಂತಿದ್ದವು. ಇದರ ಪರಿಣಾಮವಾಗಿ ಹಳೆಯಂಗಡಿಯ ಒಳರಸ್ತೆಗಳಲ್ಲೂ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.