ಉಡುಪಿ, ಮೇ. 25 (DaijiworldNews/AA): ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರೂ, ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯದ ಕೊರತೆ ಎದುರಾಗಿದ್ದು, ಬಡ ರೋಗಿಗಳು, ಅವರ ಸಂಬಂಧಿಕರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.

ಆಸ್ಪತ್ರೆಯಲ್ಲಿದ್ದ ಕ್ಯಾಂಟೀನ್ ಕಳೆದ ಒಂದು ತಿಂಗಳಿನಿಂದ ಮುಚ್ಚಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಆಸ್ಪತ್ರೆಯ ಒಳಗಿರುವ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಇದ್ದರೂ, ಅವರ ಜೊತೆಗಿರುವ ಸಂಬಂಧಿಕರು/ಸಹಾಯಕರು ಊಟಕ್ಕಾಗಿ ದೂರದ ಹೋಟೆಲ್ಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅವರಿಗೆ ಆರ್ಥಿಕವಾಗಿ ಭಾರಿ ತೊಂದರೆಯಾಗಿದೆ.
ಮತ್ತೊಂದೆಡೆ, ಆಸ್ಪತ್ರೆಯ ಫಾರ್ಮಸಿಯಲ್ಲಿ ಅಗತ್ಯ ಔಷಧಿಗಳು ಮತ್ತು ಇಂಜೆಕ್ಷನ್ಗಳ ಕೊರತೆ ಇದೆ. ವೈದ್ಯರು ಬರೆದುಕೊಡುವ ಹಲವು ದುಬಾರಿ ಔಷಧಿಗಳು ಆಸ್ಪತ್ರೆಯ ಒಳಗೆ ಸಿಗುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಹೊರಗಿನ ಖಾಸಗಿ ಮೆಡಿಕಲ್ ಶಾಪ್ಗಳಿಂದ ಹೆಚ್ಚಿನ ಹಣ ನೀಡಿ ಔಷಧಿಗಳನ್ನು ಖರೀದಿಸಬೇಕಾಗಿ ಬಂದಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲೇ ಎಲ್ಲಾ ರೀತಿಯ ಅಗತ್ಯ ಔಷಧಿಗಳು ಸುಲಭವಾಗಿ ಸಿಗುವಂತೆ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ರೀತಿಯ ಸಮಸ್ಯೆಗಳು ಇಲ್ಲೇ ಸಮೀಪದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲೂ ಕಂಡುಬಂದಿದೆ. ಈ ಬಹುಮಹಡಿ ಕಟ್ಟಡದಲ್ಲಿರುವ ಲಿಫ್ಟ್ ಕಳೆದ ಹಲವು ದಿನಗಳಿಂದ ಕೆಟ್ಟು ಹೋಗಿದೆ. ಇದರಿಂದಾಗಿ ಗರ್ಭಿಣಿಯರು, ವೃದ್ಧರು ಹಾಗೂ ವಿಕಲಚೇತನರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದ್ದು, ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪೌಷ್ಟಿಕ ಪಾನೀಯಗಳು, ಸೋಪು, ಎಣ್ಣೆ ಮತ್ತು ಟೂತ್ ಪೇಸ್ಟ್ಗಳಂತಹ ದೈನಂದಿನ ಕನಿಷ್ಠ ಅಗತ್ಯ ವಸ್ತುಗಳು ಸಹ ಲಭ್ಯವಿಲ್ಲ. ಇನ್ನು ಆಸ್ಪತ್ರೆಯ ಶವಾಗಾರದಲ್ಲಿ, ವಾರಸುದಾರರು ಇರುವ ಹಾಗೂ ಇಲ್ಲದ ಮೃತದೇಹಗಳನ್ನು ಮುಚ್ಚಲು ಬಳಸುವ ಪ್ಲಾಸ್ಟಿಕ್ ಕವರ್ಗಳು, ದೇಹದ ಅಂಗಾಗಗಳನ್ನು ಸಂರಕ್ಷಿಸಿಡಲು ಬೇಕಾದ ಪ್ಲಾಸ್ಟಿಕ್ ಡಬ್ಬಿಗಳು ಮತ್ತು ಸುಗಂಧ ದ್ರವ್ಯಗಳ ಬಾಟಲಿಗಳು ಕೊರತೆಯಿದೆ. ಇದರಿಂದಾಗಿ ಮೃತರ ಸಂಬಂಧಿಕರು ಇವುಗಳನ್ನು ಹೊರಗಿನಿಂದ ತರಲು ಪರದಾಡುವಂತಾಗಿದೆ.
ಆಸ್ಪತ್ರೆಯ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಚಿಕಿತ್ಸೆ ಪಡೆದು ಗುಣಮುಖರಾದ ನಂತರವೂ ಆಸ್ಪತ್ರೆಯಲ್ಲೇ ಉಳಿದುಕೊಳ್ಳುತ್ತಿರುವ ಅನಾಥ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು. ಸಾಮಾಜಿಕ ಕಾರ್ಯಕರ್ತರು ಮತ್ತು ತುರ್ತು ಸೇವಾ ಸಿಬ್ಬಂದಿಗಳು ಗುರುತು ಪತ್ತೆಯಾಗದ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ, ಅವರು ಗುಣಮುಖರಾದ ಬಳಿಕ ಅವರನ್ನು ಮುಂದಿನ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.
ಆದ್ದರಿಂದ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಗಮನಹರಿಸಿ, ಗುಣಮುಖರಾದ ಇಂತಹ ಅನಾಥ ವ್ಯಕ್ತಿಗಳನ್ನು ಸೂಕ್ತ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.