ಮಂಗಳೂರು, ಮೇ. 26 (DaijiworldNews/AA): ಭಾರಿ ಮಳೆಯಿಂದಾಗಿ ರಸ್ತೆ ಹಾನಿ, ಭೂಕುಸಿತ, ಮನೆ ಕುಸಿತ ಹಾಗೂ ಇನ್ನಿತರ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿರಬೇಕು. ವಿಶೇಷವಾಗಿ ಕಳೆದ ವರ್ಷ ತೀವ್ರ ಪ್ರವಾಹಕ್ಕೆ ತುತ್ತಾಗಿದ್ದ ಪ್ರದೇಶಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಡಿಸಿ) ದರ್ಶನ್ ಎಚ್.ವಿ ನಿರ್ದೇಶನ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಗಾರು ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾದರೆ ತಕ್ಷಣವೇ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಬಗ್ಗೆ ಮೆಸ್ಕಾ ಇಲಾಖೆ ಕ್ರಮಕೈಗೊಳ್ಳಬೇಕು. ತುರ್ತು ಕೆಲಸಗಳ ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ವಿದ್ಯುತ್ ತಂತಿಗಳ ಮೇಲೆ ಅಪಾಯಕಾರಿ ಮರದ ಕೊಂಬೆಗಳನ್ನು ಕಡಿಯಲು ಕ್ರಮವಹಿಸಬೇಕು" ಎಂದು ಸೂಚಿಸಿದರು.
"ಭಾರಿ ಮಳೆಯ ಸಮಯದಲ್ಲಿ ನಿಯಂತ್ರಣ ಕೊಠಡಿಗಳು 24 ಗಂಟೆಯೂ ಕಾರ್ಯನಿರ್ವಹಿಸಬೇಕು. ನಗರ ಮತ್ತು ಸ್ಥಳೀಯ ಸಂಸ್ಥೆಗಳು ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ರಾಜಕಾಲುವೆ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು ನೈರ್ಮಲ್ಯ ಕಾಪಾಡಬೇಕು" ಎಂದು ಅಧಿಕಾರಿಗಳಿಗೆ ತಿಳಿಸಿದರು.
"ಅಗ್ನಿ ಶಾಮಕ ದಳ ಮತ್ತು ಎಸ್ಡಿಆರ್ಎಫ್ ತಂಡವು ಭಾರಿ ಮಳೆ ಸಂದರ್ಭ ರಕ್ಷಣಾ ಸಾಮಾಗ್ರಿಯೊಂದಿಗೆ ಸನ್ನದ್ಧರಾಗಿರಬೇಕು. ನೆರೆ ಉಂಟಾದಲ್ಲಿ ಅವಶ್ಯ ಬೋಟುಗಳ ಶೇಖರಣೆ ಮಾಡಿಸಿಟ್ಟುಕೊಳ್ಳಬೇಕು. ಅವಶ್ಯವಿರುವ ಎಲ್ಲಾ ಪರಿಕರಗಳನ್ನು ಇರಿಸಿಕೊಳ್ಳಬೇಕು" ಎಂದು ಹೇಳಿದರು.
ಪ್ರವಾಹ ಸಂದರ್ಭ ನದಿನೀರು ಸರಾಗವಾಗಿ ಹರಿದು ಹೋಗಲು ಹಾಕಿರುವ ಗೇಟುಗಳನ್ನು ತೆರವುಗೊಳಿಸಬೇಕು. ಕಿಂಡಿ ಅಣೆಕಟ್ಟಿನ ಸುರಕ್ಷತಾ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಪ್ರಾಣಿ-ಪಕ್ಷಿಗಳಿಗೆ ಮಳೆಗಾಲದ ಸಂದರ್ಭ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗಾಳಿ ಮಳೆಯಿಂದ ದೊಡ್ಡ ದೊಡ್ಡ ಮರಗಳು ಹೆದ್ದಾರಿ, ರಸ್ತೆ, ಕಟ್ಟಡಗಳ ಮೇಲೆ ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರೆವುಗೊಳಿಸಿ ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಣಿಗಾರಿಕೆ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿ ಯಾಗುವ ಅಪಾಯವಿದೆ. ಹಾಗಾಗಿ ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ಈಜಾಟವನ್ನು ನಿಷೇಧಿಸಿದೆ ಎಂಬ ಬಗ್ಗೆ ಎಚ್ಚರಿಕಾ ಫಲಕವನ್ನು ಅಳವಡಿಸಬೇಕು. ಆದಾಗ್ಯೂ ನೀರು ತುಂಬಿದ ಗಣಿ ಹೊಂಡಗಳಿಗೆ ಇಳಿದು ಯಾವುದೇ ಅಪಘಾತ ಸಂಭವಿಸಿದಲ್ಲಿ ಗಣಿ ಮಾಲೀಕರು ಅಥವಾ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೀನುಗಾರರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜೂನ್ನಿಂದ ಸೆಪ್ಟೆಂಬರ್ವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ನಗರದಲ್ಲಿ ಜಲಸಿರಿ ಕಾಮಗಾರಿಗೆ ರಸ್ತೆಗಳನ್ನು ಅಗೆದಿದ್ದು, ಸರಿಯಾಗಿ ಗುಂಡಿಗಳನ್ನು ಮುಚ್ಚದಿರುವುದರಿಂದ ವಾಹನ ಸವಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ನಗರಪಾಲಿಕೆ ಸೂಕ್ತ ಕ್ರಮಕೈಗೊಳ್ಳಬೇಕು" ಎಂದರು.
ಶಾಲೆಗಳ ಸಮೀಪವಿರುವ ಅಪಾಯಕಾರಿ ಕೆರೆಗಳು, ಹೊಂಡಗಳು ಮತ್ತು ಅಂತಹುದೇ ಅಪಾಯಕಾರಿ ಸ್ಥಳಗಳ ಸುತ್ತಲೂ ಕೆಂಪು ಎಚ್ಚರಿಕೆ ಟೇಪ್ಗಳನ್ನು ಅಳವಡಿಸಬೇಕು. ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು.
ಪ್ರವಾಹದ ತುರ್ತು ಸಂದರ್ಭಗಳಲ್ಲಿ ಕಾಳಜಿ ಕೇಂದ್ರಗಳಾಗಿ ಬಳಸಲು ಸೂಕ್ತವಾದ ಶಾಲಾ ಕಟ್ಟಡಗಳನ್ನು ಗುರುತಿಸಿ ಸಿದ್ಧವಾಗಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.