ಉಡುಪಿ, ಮೇ. 30 (DaijiworldNews/AK): ಸಾರ್ವಜನಿಕರಿಂದ ದೂರುಗಳ ಆಧಾರದ ಮೇಲೆ ಉಡುಪಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಆದಿ ಉಡುಪಿಯಲ್ಲಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ವಿವಿಧ ಶಾಖೆಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದರು.

ಕರ್ನಾಟಕ ಲೋಕಾಯುಕ್ತ ಬೆಂಗಳೂರು ಕಚೇರಿಯಿಂದ ಶೋಧನಾ ವಾರಂಟ್ ಪಡೆದು ಇಂದಿನ ಕಾರ್ಯಾಚರಣೆ ಯನ್ನು ಕಾರ್ಯಾಚರಣೆ ಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ ದಿನೇಶ್ಕುಮಾರ್ ಮಾರ್ಗದರ್ಶನ ದಲ್ಲಿ, ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ನಾಯ್ಕ್ ಹಾಗೂ ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ದಾಳಿಯ ವೇಳೆ ವಿಲೇವಾರಿಗೆ ಬಾಕಿಯಿದ್ದ ಹಲವಾರು ಕಡತಗಳು ಪತ್ತೆಯಾಗಿದ್ದು, ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದ ಕಡತಗಳು ಸೇರಿದಂತೆ ಸುಮಾರು 200 ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡಿದೆ. ಈ ಸಂಬಂಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬೆಂಗಳೂರು ಲೋಕಾಯುಕ್ತರಿಗೆ ವಿವರವಾದ ವರದಿ ಸಲ್ಲಿಸಲಾಗುವುದು ಎಂದು ಡಿವೈಎಸ್ಪಿ ಅವರು ತಿಳಿಸಿದ್ದಾರೆ.