ಮಂಗಳೂರು, ಜೂ. 05 (DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ಶುಕ್ರವಾರ ಮುಂಜಾನೆಯಿಂದಲೇ ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆ ಮತ್ತೆ ತಲೆದೋರಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಮಂಗಳೂರಿನ ಕೂಳೂರು ಬಸ್ ನಿಲ್ದಾಣದ ಸಮೀಪ ಭಾರೀ ಮಳೆಯಿಂದ ರಸ್ತೆ ಬದಿಯಲ್ಲಿ ನೀರು ನಿಂತು ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಯ ಮೇಲೆ ನೀರು ಸಂಗ್ರಹಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
ಮಳೆ ನೀರು ರಸ್ತೆ ಮೇಲೆ ನಿಂತ ಪರಿಣಾಮ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಬೆಳಿಗ್ಗೆ ಕೆಲಸಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಕಂಡುಬಂದಿದೆ. ಕೆಲವೆಡೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಸಂಚಾರ ದಟ್ಟಣೆಯೂ ಉಂಟಾಯಿತು. ಸ್ಥಳೀಯರು ಹಲವು ಬಾರಿ ಚರಂಡಿ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತೀ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಸುರಿದ ಭಾರೀ ಮಳೆಯಿಂದ ಕೂಳೂರು ಪ್ರದೇಶದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗಿತ್ತು. ಮನೆಗಳು, ಅಂಗಡಿಗಳು ಹಾಗೂ ರಸ್ತೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಘಟನೆ ಇನ್ನೂ ಸ್ಥಳೀಯರ ನೆನಪಿನಲ್ಲಿದೆ. ಇದೀಗ ಮತ್ತೆ ಭಾರೀ ಮಳೆಯೊಂದಿಗೆ ಅದೇ ಪರಿಸ್ಥಿತಿ ಮರುಕಳಿಸುವ ಭೀತಿ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಚರಂಡಿ ವ್ಯವಸ್ಥೆಯನ್ನು ತುರ್ತಾಗಿ ದುರಸ್ತಿಗೊಳಿಸಿ ನೀರು ಹರಿಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.