ಬಂಟ್ವಾಳ, ಜೂ. 05 (DaijiworldNews/AA): ಬಂಟ್ವಾಳ ಮೂಲದ, ಕುವೈತ್ನಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ಕೆಲಸದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಬಂಟ್ವಾಳ ತಾಲೂಕಿನ ತಲಪಾಡಿ ನಿವಾಸಿ ಅಬ್ದುಲ್ ರಜಾಕ್ ವಳಚ್ಚಿಲ್(58) ಎಂದು ಗುರುತಿಸಲಾಗಿದೆ.
ಮೂಲತಃ ವಳಚ್ಚಿಲ್ ನಿವಾಸಿಯಾಗಿದ್ದ ಅಬ್ದುಲ್ ರಜಾಕ್, ಬಳಿಕ ತಲಪಾಡಿಯಲ್ಲಿ ಮನೆ ಕಟ್ಟಿ ನೆಲೆಸಿದ್ದರು. ಅವರು ಕಳೆದ ಹಲವು ವರ್ಷಗಳಿಂದ ಕುವೈತ್ನ ಫರ್ವಾನಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕುಟುಂಬಸ್ಥರ ಮಾಹಿತಿ ಪ್ರಕಾರ, ಬುಧವಾರ ಕೆಲಸದಲ್ಲಿದ್ದಾಗ ಅವರು ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಗುರುವಾರ ತಡರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ಶರೀರ ತಲುಪುವ ನಿರೀಕ್ಷೆಯಿದ್ದು, ಬಳಿಕ ಶುಕ್ರವಾರ ಅಂಬುಲೆನ್ಸ್ ಮೂಲಕ ತಲಪಾಡಿಗೆ ಸಾಗಿಸಲಾಗುವುದು ಎಂದು ತಿಳಿದುಬಂದಿದೆ.
ತಲಪಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಜನಾಜ ನಮಾಜ್ ನೆರವೇರಿದ ಬಳಿಕ ಮೊಫತ್ ಲಾಲ್ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.