ಕಾಸರಗೋಡು, ಜೂ. 05 (DaijiworldNews/AA): ಕಾಸರಗೋಡಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮೇಲೆ ವಿಜಿಲೆನ್ಸ್ ಇಲಾಖೆಯು ಅನಿರೀಕ್ಷಿತ ದಾಳಿ ನಡೆಸಿದ್ದು, ಕಚೇರಿಯ ಹೊರಗೆ ಇಟ್ಟಿದ್ದ ಹೂವಿನ ಕುಂಡಗಳಲ್ಲಿ ಬಚ್ಚಿಟ್ಟಿದ್ದ ಲಂಚದ ಹಣವನ್ನು ಪತ್ತೆಹಚ್ಚಿದೆ.



ವಿಜಿಲೆನ್ಸ್ ಡಿವೈಎಸ್ಪಿ ಉನ್ನಿಕೃಷ್ಣನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ದಾಳಿಯ ವೇಳೆ, ಆರ್ಟಿಒ ಕಚೇರಿಯ ಮುಂಭಾಗದಲ್ಲಿದ್ದ ಹೂವಿನ ಕುಂಡಗಳ ಅಡಿಯಲ್ಲಿ ಮರೆಮಾಡಲಾಗಿದ್ದ 17,150 ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ.
ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಮತ್ತು ಲಂಚ ನೀಡದೆ ಕಾಸರಗೋಡು ಆರ್ಟಿಒ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ನಿರಂತರ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ವಿವಿಧ ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳು, ಏಜೆಂಟರ ಮೂಲಕ ಹಣದೊಂದಿಗೆ ಸಲ್ಲಿಸಲಾದ ಮನವಿಗಳು ಮತ್ತು ಅರ್ಹ ನಾಗರಿಕರಿಗೆ ಸೇರಬೇಕಾದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಚೇರಿಯ ಸಿಬ್ಬಂದಿ ಮತ್ತು ಏಜೆಂಟರು ಸಾರ್ವಜನಿಕರಿಂದ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಮತ್ತು ಏಜೆಂಟರ ಮೂಲಕವೇ ಕೆಲಸಗಳು ನಡೆಯುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ, ಕಾಸರಗೋಡು ಮತ್ತು ಕಾಞಂಗಾಡ್ ಆರ್ಟಿಒ ಕಚೇರಿಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಾಞಂಗಾಡ್ ಕಚೇರಿಯಿಂದಲೂ ವಾಹನಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಮತ್ತು ಅರ್ಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.