ಕಾಸರಗೋಡು, ಜೂ. 07 (DaijiworldNews/TA): ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾಸರಗೋಡಿನ ಹಲವೆಡೆ ಹಾನಿ ಸಂಭವಿಸಿದೆ. ಉಪ್ಪಳ ಕೈಕಂಬದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದ ಘಟನೆ ಶನಿವಾರ ನಡೆದಿದೆ.

ಕೈಕಂಬದ ಖಾಲಿದ್ ರವರ ಮನೆಯ ಮೇಲೆ ಗುಡ್ಡ ಕುಸಿದು ಈ ಘಟನೆ ನಡೆದಿದೆ. ಮನೆಯವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಕುನಿಯದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅತ್ತ ಪೆರಿಯ , ಚೆರ್ಕಳ , ಕುಂಬಳೆ , ಮಂಜೇಶ್ವರ ಹಾಗೂ ಇನ್ನಿತರ ಕಡೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಧೂರು ದೇವಸ್ಥಾನ ಸಮೀಪ ಮರ ಬಿದ್ದು ವಾಹನಗಳಿಗೆ ಹಾನಿ ಉಂಟಾಗಿದೆ.
ಎರಡು ಸ್ಕೂಟರ್ ಐದಕ್ಕೂ ಅಧಿಕ ವಾಹನಗಳು ಹಾನಿಗೊಂಡಿವೆ. ಗಾಳಿ ಮಳೆಗೆ ಮರ ಉರುಳಿ ಬಿದ್ದಿದ್ದು, ಮರದಡಿ ನಿಲುಗಡೆ ಗೊಳಿಸಿದ್ದ ವಾಹನಗಳ ಮೇಲೆ ಮರ ಬಿದ್ದಿದ್ದು , ವಾಹನದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಮರವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ತೆರವು ಗೊಳಿಸಿದರು.