ಪುತ್ತೂರು, ಜೂ. 08 (DaijiworldNews/AA): ಕೊಕ್ಕಡ ಗ್ರಾಮದ ಕೊಪ್ಪಲಕೋಡಿ ನಿವಾಸಿ ಮತ್ತು ಸೌತಡ್ಕದ ಸಮೀಪ ಜ್ಯೂಸ್ ಸೆಂಟರ್ ಹೊಂದಿದ್ದ ಧನಂಜಯ್ (36) ಅವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸಿಗದ ಕಾರಣ ಅವರು ಮೃತಪಟ್ಟಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಧನಂಜಯ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಆಂಬ್ಯುಲೆನ್ಸ್ ಇದ್ದರೂ ಸಹ, ತುರ್ತು ಸಂದರ್ಭದಲ್ಲಿ ಅದು ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಕುಟುಂಬಸ್ಥರು ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ದಾರಿ ಮಧ್ಯೆಯೇ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮೃತ ಧನಂಜಯ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೊಕ್ಕಡದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರವಿದ್ದರೂ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿದ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತುಷಾರ್, "108 ಆಂಬ್ಯುಲೆನ್ಸ್ಗೆ ಒಬ್ಬರೇ ಚಾಲಕರಿದ್ದಾರೆ. ಅವರು ಹಗಲಿನಲ್ಲಿ ಕರ್ತವ್ಯ ನಿರ್ವಹಿಸುವುದಲ್ಲದೆ, ರಾತ್ರಿಯ ತುರ್ತು ಕರೆಗಳಿಗೂ ಸ್ಪಂದಿಸುತ್ತಾರೆ. ಘಟನೆ ನಡೆದ ದಿನ ಚಾಲಕರು ರಜೆಯಲ್ಲಿದ್ದ ಕಾರಣ ಆಂಬ್ಯುಲೆನ್ಸ್ ಸೇವೆ ಲಭ್ಯವಿರಲಿಲ್ಲ" ಎಂದು ವಿವರಿಸಿದ್ದಾರೆ.