ಬೆಳ್ತಂಗಡಿ, ಜೂ. 09 (DaijiworldNews/AA): ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಲಾಗಿದ್ದು, 23,67,000 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಟ್ವಾಳ ಕೊಳ್ನಾಡು ನಿವಾಸಿ ಹಮೀದ್ ಹಾಗೂ ಬಂಟ್ವಾಳ ಕೊಳ್ನಾಡು ನಿವಾಸಿ ಜಾಬೀರ್ ಅಲಿಯಾಸ್ ಜಾಬೀ (38) ಬಂಧಿತ ಆರೋಪಿಗಳು.
ಏ.5 ರಂದು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿ ಮೇ 15 ರಂದು ಆರೋಪಿ ಹಮೀದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ತನಿಖಾ ತಂಡ ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಈ ಆರೋಪಿಯ ವಿಚಾರಣೆಯ ವೇಳೆ ನೀಡಿದ ಮಾಹಿತಿಯ ಆಧಾರದಲ್ಲಿ ಜೂ.7 ರಂದು ಮತ್ತೋರ್ವ ಆರೋಪಿ ಜಾಬೀರ್ ಅಲಿಯಾಸ್ ಜಾಬೀ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿ ಪುಂಜಾಲಕಟ್ಟೆ ಠಾಣಾ ಅ.ಕ್ರ: 38/2026 ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 68.690 ಗ್ರಾಂ ಚಿನ್ನಾಭರಣ ಹಾಗೂ 2,00,000 ರೂ. ನಗದು ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 28/2025 ಪ್ರಕರಣಕ್ಕೆ ಸಂಬಂಧಿಸಿದ 21.810 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳ ಒಟ್ಟು ಮೌಲ್ಯ 23,67,000 ರೂ. ಗಳಾಗಿರುತ್ತದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪ್ರಕರಣಗಳನ್ನು ಹೊರತುಪಡಿಸಿದಂತೆ ಆರೋಪಿಗಳು ಉಪ್ಪಿನಂಗಡಿ ಠಾಣೆ, ಬಂಟ್ವಾಳ ನಗರ ಠಾಣೆ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದ್ದು ತನಿಖೆ ಮುಂದುವರಿಯುತ್ತದೆ.
ಆರೋಪಿಗಳ ಪತ್ತೆಕಾರ್ಯದಲ್ಲಿ ಬೆಳ್ತಂಗಡಿ ಉಪವಿಭಾಗಾಧೀಕ್ಷಕರಾದ ರೋಹಿಸಿ ಸಿ.ಕೆ ರವರ ನೇತ್ರತ್ವದಲ್ಲಿ, ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ ನಾಗರಾಜ್ ಹೆಚ್.ಇ, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಏ.ಎಸ್.ಐ ಬೆನ್ನಿಚ್ಚನ್, ಏ.ಎಸ್.ಐ ಸುಂದರ ಶೆಟ್ಟಿ, ಏ.ಎಸ್.ಐ ವಿಶ್ವನಾಥ್ ನಾಯ್ಕ್, ಪ್ರವೀಣ್ ಮೂರುಗೋಳಿ, ರಾಜೇಶ್ ಎನ್, ವಿಜಯ್ ಕುಮಾರ್ ರೈ, ರಾಹುಲ್ ರಾವ್, ಸಂತೋಷ್, ಬಸವರಾಜ್, ರಜಿತ್, ನಾಗರಾಜ್ ರವರು ಭಾಗಿಯಾಗಿದ್ದು, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ರವರು ಸಹಕರಿಸಿರುತ್ತಾರೆ.