ಉಡುಪಿ, ಜೂ. 09 (DaijiworldNews/AA): ಉಡುಪಿಯ ಮಿಷನ್ ಕಾಂಪೌಂಡ್ನ ಶಾಲಾ ವಲಯದ ಬಳಿ ಇರುವ ಸ್ಪೀಡ್ ಬ್ರೇಕರ್, ಸರಿಯಾದ ರಸ್ತೆ ಗುರುತುಗಳು, ಎಚ್ಚರಿಕೆ ಫಲಕಗಳು ಮತ್ತು ಪ್ರತಿಫಲಕಗಳು ಇಲ್ಲದಿರುವುದರಿಂದ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.











ಉಡುಪಿ ಮತ್ತು ಬೈಲೂರು ಸಂಪರ್ಕಿಸುವ ಜನನಿಬಿಡ ರಸ್ತೆಯಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಸಮೀಪ ಈ ಸ್ಪೀಡ್ ಬ್ರೇಕರ್ ಇದೆ. ಇದು ಉಡುಪಿಯಿಂದ ಬೈಲೂರು ಮತ್ತು ಬೈಲೂರಿನಿಂದ ಉಡುಪಿ ಕಡೆಗೆ ಸಂಚರಿಸುವ ಎರಡೂ ದಿಕ್ಕಿನ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ನಿತ್ಯ ಸಂಚರಿಸುವವರಿಗೆ ಈ ಹಂಪ್ಸ್ ಇರುವ ವಿಷಯ ತಿಳಿದಿದ್ದರೂ, ಹೊಸದಾಗಿ ಸಂಚರಿಸುವವರು ಹಾಗೂ ಅಪರೂಪಕ್ಕೆ ಈ ಮಾರ್ಗದಲ್ಲಿ ಬರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಯಲ್ಲಿನ ಸ್ಪೀಡ್ ಬ್ರೇಕರ್ ಇರುವ ಅರಿವಿಲ್ಲದ ಚಾಲಕರು ಸಾಮಾನ್ಯ ವೇಗದಲ್ಲಿ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಹಂಪ್ಸ್ ಎದುರಾದಾಗ ಗಾಬರಿಗೊಳ್ಳುವಂತಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಮುನ್ನೆಚ್ಚರಿಕೆ ಫಲಕಗಳಿಲ್ಲದ ಕಾರಣ, ವಾಹನಗಳ ಮೇಲಿನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಾಗಿದೆ ಎಂದು ಸವಾರರು ದೂರು ನೀಡಿದ್ದಾರೆ.
ಈ ಹಿಂದೆ ಈ ಸ್ಪೀಡ್ ಬ್ರೇಕರ್ ಗೆ ಸರಿಯಾದ ರಸ್ತೆ ಗುರುತುಗಳಿದ್ದವು. ಆದರೆ, ಇತ್ತೀಚೆಗೆ ನಡೆದ ರಸ್ತೆ ದುರಸ್ತಿ ಮತ್ತು ಡಾಂಬರೀಕರಣದ ನಂತರ, ಆ ಗುರುತುಗಳು ಮಾಯವಾಗಿದ್ದು, ಅವುಗಳನ್ನು ಮರುಸ್ಥಾಪಿಸಲಾಗಿಲ್ಲ. ನಗರದಾದ್ಯಂತ ಹಲವು ರಸ್ತೆಗಳಲ್ಲಿ ಇದೇ ರೀತಿಯ ಗುರುತಿಲ್ಲದ ಹಂಪ್ಸ್ಗಳು ಅಳವಡಿಸಲಾಗಿದ್ದು, ಅರಿವಿಲ್ಲದ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಸ್ಪೀಡ್ ಬ್ರೇಕರ್ ಗೆ ತಕ್ಷಣವೇ ರಿಫ್ಲೆಕ್ಟಿವ್ ಪೇಂಟ್, ರಸ್ತೆ ಗುರುತುಗಳು, ಎಚ್ಚರಿಕೆ ಫಲಕಗಳು ಮತ್ತು ಕ್ಯಾಟ್-ಐ ರಿಫ್ಲೆಕ್ಟರ್ಗಳನ್ನು ಅಳವಡಿಸುವಂತೆ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದು ಶಾಲಾ ವಲಯದ ಸಮೀಪವಿರುವುದರಿಂದ, ರಸ್ತೆ ಸುರಕ್ಷತಾ ಕ್ರಮಗಳು ಅತ್ಯಗತ್ಯವಾಗಿದೆ.
ಗಂಭೀರ ಅಪಘಾತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಇಂತಹ ಮುನ್ನೆಚ್ಚರಿಕಾ ಕ್ರಮಗಳು ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸಲಿವೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.