ಬಂಟ್ವಾಳ, ಜೂ. 09 (DaijiworldNews/TA):ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಎಸ್ಸಿ/ಎಸ್ಟಿ ಕುಂದುಕೊರತೆ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಪ್ರಗತಿ ಕಾಲನಿ ಯೋಜನೆಯ ಅನುದಾನವು ದಲಿತರು ವಾಸಿಸದ ಪ್ರದೇಶಗಳಲ್ಲಿ ವಿನಿಯೋಗವಾಗುತ್ತಿರುವ ಕುರಿತು ಮಹಾಲಿಂಗ ನಾಯ್ಕ ಪುಣಚ ಆಕ್ಷೇಪ ವ್ಯಕ್ತಪಡಿಸಿದಾಗ, ಈ ನಿಧಿಯನ್ನು ಬೇರೆಡೆಗೆ ವರ್ಗಾಯಿಸಲು ಬರಲ್ಲ ಎಂದು ಇಒ ಸಚಿನ್ ಕುಮಾರ್ ಸ್ಪಷ್ಟಪಡಿಸಿದರು. ಬಡ್ಡಕಟ್ಟೆ ಸ್ಮಶಾನ ಕಾಮಗಾರಿ ಗುಣಮಟ್ಟ ಹಾಗೂ ಪುರಸಭೆಯ ಅನುದಾನದ ಕುರಿತು ಮೋಹನ್ ಚಂಡ್ತಿಮಾರ್ ಮತ್ತು ಗಂಗಾಧರ ಪರಾರಿ ಅವರು ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ಪ್ರಶ್ನಿಸಿದರು.
ಮುಖಂಡ ಗಿರಿಧರ ನಾಯ್ಕ್ ಪುಣಚದ ಫಲಾನುಭವಿಗಳ ಹಕ್ಕುಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ಹಕ್ಕುಪತ್ರಗಳು ಸಿದ್ಧವಿದ್ದು ಮುಂದಿನ ಅಕ್ರಮ-ಸಕ್ರಮ ಸಭೆಯಲ್ಲಿ ಶಾಸಕರ ಮೂಲಕ ವಿತರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. ಇನ್ನು ಕೆಎಸ್ಆರ್ಟಿಸಿ ಬಸ್ಗಳ ಮಿತಿಮೀರಿದ ಜನದಟ್ಟಣೆ ವಿರುದ್ಧ ಆರ್ಟಿಒ ಕ್ರಮ ಕೈಗೊಳ್ಳದಿರುವ ಬಗ್ಗೆ ವಿಶ್ವನಾಥ ಚಂಡ್ತಿಮಾರ್ ಅಸಮಾಧಾನ ವ್ಯಕ್ತಪಡಿಸಿದರೆ, ಸತೀಶ್ ಅರಳ ಅವರು ಹೆಣ್ಣುಮಕ್ಕಳ ಸುರಕ್ಷತೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿನಯ ಕುಮಾರಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.