ಉಡುಪಿ, ಜೂ. 10 (DaijiworldNews/AA): ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಆಂಧ್ರಪ್ರದೇಶದ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ಮಂಗಳವಾರ ರಾತ್ರಿ ಮಾರಾಮಾರಿ ನಡೆದಿದೆ.






ಈ ಸಂಬಂಧ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿ ಸುಪ್ರೀತ್ ಕುಮಾರ್ (40) ಎಂಬವರನ್ನು ಬಂಧಿಸಿದ್ದು, ಪರಸ್ಪರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್ನಿಂದ ಬಂದಿದ್ದ ಪ್ರವಾಸಿಗರ ತಂಡ ಮತ್ತು ಕೊರಂಗ್ರಪಾಡಿಯ ಸ್ಥಳೀಯ ನಿವಾಸಿ ಸುಪ್ರೀತ್ ಕುಮಾರ್ ಎಂಬವರ ನಡುವೆ ಜನನಿಬಿಡ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ಚಲಾಯಿಸುವ ವಿಚಾರವಾಗಿ ವಾಗ್ವಾದ ಉಂಟಾಗಿತ್ತು.
ತಮ್ಮ ಮೇಲೆ ಸುಪ್ರೀತ್ ಕುಮಾರ್ ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಗಲಾಟೆಯ ಸಂದರ್ಭದಲ್ಲಿ ವಾಹನವನ್ನು ತಮ್ಮ ಮೇಲೆ ಕಾರು ಹಾಯಿಸಲು ಯತ್ನಿಸಿದರು ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಅಲ್ಲದೆ, "ನಾನು ಲೋಕಲ್ ವ್ಯಕ್ತಿ, ನಾನು ಕಾರು ಚಲಾಯಿಸುವುದೇ ಹೀಗೆ" ಎಂದು ಬೆದರಿಕೆ ಹಾಕಿದ್ದಾನೆ. ಜೊತೆಗೆ ವಾಹನದಲ್ಲಿದ್ದ ಕಂಬಳದ ಕೋಲಿನಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಘಟನೆಯಲ್ಲಿ ಕೆಲ ಪ್ರವಾಸಿಗರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಕುರಿತು ಹೈದರಾಬಾದ್ನ ನಿವಾಸಿ ಪವನ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸುಪ್ರೀತ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಸುಪ್ರೀತ್ ಕುಮಾರ್ ಅವರು ಪ್ರವಾಸಿಗರ ವಿರುದ್ಧ ಪ್ರತಿದೂರು ನೀಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸುವಂತೆ ವಿನಂತಿಸಿದ್ದಕ್ಕೆ ಪ್ರವಾಸಿಗರು ತಮ್ಮ ಕಾರಿನ ಗಾಜನ್ನು ಒಡೆದು, ಕುರ್ಚಿ ಮತ್ತು ಫೋಟೋ ಸ್ಟ್ಯಾಂಡ್ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತಮ್ಮ ಬಾಯಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಪ್ರವಾಸಿಗರ ತಂಡವು ಮಹಿಳೆಯರು ಮತ್ತು ಮಕ್ಕಳೊಂದಿಗೆ ಶ್ರೀ ಕೃಷ್ಣ ಮಠಕ್ಕೆ ದರ್ಶನ ಪಡೆಯಲು ಆಗಮಿಸಿತ್ತು.
ಸ್ಥಳೀಯರು ಮತ್ತು ನೆರೆದಿದ್ದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಉಡುಪಿ ನಗರ ಪೊಲೀಸರು ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸುಪ್ರೀತ್ ಕುಮಾರ್ ಅವರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.