ಕಾಸರಗೋಡು, ಜೂ. 10 (DaijiworldNews/AA): ಮಂಗಳವಾರ ರಾತ್ರಿ ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪ ಸಂಭವಿಸಿದ ಎರಡು ಪ್ರತ್ಯೇಕ ರೈಲು ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಮೃತ ಮನೀಶ್
ಮೃತರನ್ನು ಮೊಗ್ರಾಲ್ ಪುತ್ತೂರು ಮೂಲದವರಾಗಿದ್ದು, ಮಂಜೇಶ್ವರದಲ್ಲಿ ವಾಸವಿದ್ದ ಉಮೇಶ್ (39) ಮತ್ತು ಮಂಜೇಶ್ವರ ಕೀರ್ತೇಶ್ವರದ ಮನೀಶ್ (19) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ರೈಲ್ವೆ ಹಳಿ ಮೇಲೆ ಉಮೇಶ್ ಅವರ ಮೃತದೇಹ ಪತ್ತೆಯಾಗಿದೆ. ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಮೊದಲ ಅಪಘಾತ ನಡೆದ ಸ್ವಲ್ಪ ಸಮಯದ ನಂತರ ಅಂದರೆ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೀಶ್ ಅವರ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಇವರು ಕೂಡ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮನೀಶ್ ಫ್ಯಾಬ್ರಿಕೇಶನ್ ವಲಯದಲ್ಲಿ ಕೆಲಸ ಮಾಡುತ್ತಿದ್ದರು.
ಮೃತರ ದೇಹಗಳನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಮಂಜೇಶ್ವರ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.