ಉಡುಪಿ, ಜೂ. 10 (DaijiworldNews/AK):ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಶುಕ್ರವಾರ (ಜೂ.12) ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ, ದೇವಿಯ ದರ್ಶನ ಪಡೆಯಲಿದ್ದಾರೆ.

ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿಗೆ ಅವರು ಆಗಮಿಸಲಿದ್ದಾರೆ. ದೇವಿ ದರ್ಶನ ಪಡೆದು, ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ. ಕರ್ನಾಟಕದ ರಾಜಕೀಯ ನಾಯಕರು, ತಮಿಳುನಾಡಿನ ರಾಜಕೀಯ ನಾಯಕರ ಪಾಲಿಗೆ ಕೊಲ್ಲೂರು ಭಕ್ತಿ ಶ್ರದ್ಧೆಯ ಕೇಂದ್ರವಾಗಿದೆ. ಎಂಜಿಆರ್ ಅವರಿಂದ ಹಿಡಿದು ಎಲ್ಲರೂ ಸಾಮಾನ್ಯವಾಗಿ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಎಂಜಿಆರ್ ಕೂಡ ಸಿಎಂ ಆಗಿದ್ದಾಗ ಕೊಲ್ಲೂರು ದೇಗುಲಕ್ಕೆ ಆಗಮಿಸಿ ಮೂಕಾಂಬಿಕೆಗೆ ಚಿನ್ನದ ಖಡ್ಗವನ್ನು ಭಕ್ತಿಯಿಂದ ಕಾಣಿಕೆಯಾಗಿ ಸಮರ್ಪಿಸಿದ್ದರು. ಅದಾದ ಮೇಲೆ ರಾಜಕೀಯ ಏಳುಬೀಳು ಕಾಣುವ ಹಂತದಲ್ಲಿ ಜಯಲಲಿತಾ ಕೂಡ ಶಕ್ತಿಪೀಠದ ಮೊರೆ ಹೋಗಿದ್ದರು. ಸಿಎಂ ಆದ ಮೇಲೆ ಜ್ಯೋತಿಷಿಗಳ ಸಲಹೆ ಮೇರೆಗೆ 2004 ರಲ್ಲಿ ಇಲ್ಲಿಗೆ ಬಂದು ವಿಶೇಷ ಚಂಡಿಕಾಯಾಗ ಮಾಡಿದ್ದರು. ಅಲ್ಲದೇ ಶುಕ್ರವಾರದ ಅನ್ನಸಂತರ್ಪಣೆಗೆ 30 ಸಾವಿರ ರೂ. ನೀಡಿದ್ದರು.
ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಪಾಲಿಗೆ ಮೂಕಾಂಬಿಕಾ ದೇಗುಲ ನಂಬಿಕೆ ಆರಾಧ್ಯ ಕೇಂದ್ರವಾಗಿದೆ. ಈಗ ಅಧಿಕಾರ ವಹಿಸಿಕೊಂಡ ವಿಜಯ್ ಕೂಡ ಮೂಕಾಂಬಿಕೆಯ ಮೊರೆ ಹೋಗಿದ್ದಾರೆ.