ಮಂಗಳೂರು, ಜೂ. 10 (DaijiworldNews/TA): ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ದ.ಕ ಜಿಲ್ಲೆಯ ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ಪ್ರಮುಖ ಬೀಚ್ ಗಳಲ್ಲಿ ಸಮುದ್ರದ ಮನೊರಂಜನಾ ಚಟುವಟಿಕೆಗಳಿಗೆ ಸಂಪೂರ್ಣ ತಡೆ ಹಾಕಲಾಗಿದೆ. ತೇಲುವ ಸೇತುವೆ, ಬೋಟ್ ರೈಡಿಂಗ್, ಪ್ಯಾರಾ ಸೈಲಿಂಗ್ ಸೇರಿದಂತೆ ಎಲ್ಲಾ ವಾಟರ್ ಸ್ಪೋರ್ಟ್ಸ್ 'ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಸಮುದ್ರಕ್ಕೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸುರಕ್ಷತಾ ಕ್ರಮಗಳು:
ಪಣಂಬೂರು ಬೀಚ್ ನಲ್ಲಿ ಸಮುದ್ರ ತೀರದ ಉದ್ದಕ್ಕೂ ಕೆಂಪು ಹಗ್ಗವನ್ನು ಕಟ್ಟಿ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಪಾಯವನ್ನು ಸೂಚಿಸುವ ಬೋರ್ಡ್ ಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಲೈಫ್ ಗಾರ್ಡ್ ಗಳು ಹಾಗೂ ಕರಾವಳಿ ಕಾವಲು ಪೊಲೀಸರು 24 ಗಂಟೆ ನಿಗಾ ಇಟ್ಟಿದ್ದಾರೆ. ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.
ಮುಂದುವರಿದ ಇತರೆ ಚಟುವಟಿಕೆಗಳು:
ಸಮುದ್ರದಿಂದ ದೂರ ದಡದಲ್ಲಿ ನಡೆಯುವ ಕುದುರೆ ಸವಾರಿ, ಒಂಟೆ ಸವಾರಿ ಹಾಗೂ ಮಕ್ಕಳ ಆಟದ ಮೈದಾನಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಆಹಾರ ಮಳಿಗೆಗಳು ಎಂದಿನಂತೆ ತೆರೆದಿದ್ದು, ಪ್ರವಾಸಿಗರು ದಡದಲ್ಲಿಯೇ ಕುಳಿತು ಸಮುದ್ರದ ಅಬ್ಬರದ ಅಲೆಗಳನ್ನು ವೀಕ್ಷಿಸಿ, ಬಿಸಿ-ಬಿಸಿ ತಿಂಡಿ ಸವಿಯುತ್ತಿದ್ದಾರೆ. ಪ್ರವಾಸಿಗರ ಒಲವು ಬದಲು ಕರಾವಳಿಯಲ್ಲಿ ಮೂರ್ನಾಲ್ಕು ತಿಂಗಳು ಸಮುದ್ರದ ಚಟುವಟಿಕೆಗಳಿಗೆ ವಿರಾಮ ಬೀಳುವುದರಿಂದ ಪ್ರವಾಸಿಗರ ಆಯ್ಕೆಯೂ ಬದಲಾಗುತ್ತಿದೆ. ಸಾಹಸ ಪ್ರಿಯ ಯುವಕರು ಪಶ್ಚಿಮ ಘಟ್ಟದ ಚಾರ್ಮಾಡಿ, ಕುದುರೆಮುಖ, ಅಗುಂಬೆ ಭಾಗದಲ್ಲಿ ಮಳೆಗಾಲದ ಟ್ರೆಕ್ಕಿಂಗ್ ಕಡೆಗೆ ಮುಖ ಮಾಡಿದರೆ, ಹಿರಿಯ ನಾಗರಿಕರು ಹಾಗೂ ಕುಟುಂಬ ಸಮೇತ ಬರುವವರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು, ಉಡುಪಿ ಶ್ರೀಕೃಷ್ಣ ಮಠದಂತಹ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಸಸಿಹಿತ್ತು ಮುಂಡಾ ಬೀಚ್ ನಲ್ಲಿ ನಿರ್ಬಂಧ:
ಮೂಲ್ಕಿ: ಈ ನಡುವೆ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಸಿಹಿತ್ತು ಮುಂಡಾ ಬೀಚ್ ಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮುಂಜಾಗ್ರತೆ ಅತ್ಯಗತ್ಯ:
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೀಚ್ ವ್ಯಾಪ್ತಿಯಲ್ಲಿ ಇರುವ ಎತ್ತರದ ಗಾಳಿ ಮರಗಳು ಹಾಗೂ ಇತರೆ ಮರಗಳು ಭಾರೀಗಾಳಿ-ಮಳೆಯಿಂದ ಉರುಳಿ ಬೀಳುವ ಸಾಧ್ಯತೆ ಇರುವುದರಿಂದ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬೀಚ್ ನಿರ್ವಹಣೆಯ ಪ್ರಮುಖರು ತಿಳಿಸಿದ್ದಾರೆ. ಟೆಂಪಲ್ ಟೂರಿಸಂ ಕಡೆಗೆ ಒಲವು ತೋರುತ್ತಿದ್ದಾರೆ. ಜಲಪಾತ ವೀಕ್ಷಣೆಗೆ ಆರ್ಬಿ, ಕೂಡ್ಲು ತೀರ್ಥದಂತಹ ಫಾಲ್ಸ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ.