ಬ್ರಹ್ಮಾವರ, ಜೂ. 11 (DaijiworldNews/TA): ತಾಯಿಯ ಕಂಕುಳಿನಲ್ಲಿದ್ದ ಮಗುವಿನ ಮೇಲೆ ನೇರವಾಗಿ ತೆಂಗಿನ ಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ಘಟನೆ ಬ್ರಹ್ಮಾವರದ ಹೆರಂಜೆಯಲ್ಲಿ ಸಂಭವಿಸಿದೆ.

ತಾಯಿಯು ಎಂದಿನಂತೆ 6 ವರ್ಷ ಪ್ರಾಯದ ದೊಡ್ಡ ಮಗುವನ್ನು ಶಾಲೆಗೆ ಬಿಡಲು ಹೊರಟಿದ್ದರು. ಈ ವೇಳೆ ಸಣ್ಣ ಮಗುವನ್ನು ಕೂಡ ಎತ್ತಿಕೊಂಡು ತಾಯಿ ಹೊರಟು ಸ್ವಲ್ಪ ದೂರ ಸಾಗುವಷ್ಟರಲ್ಲಿ ದಾರಿ ಬದಿಯಲ್ಲಿದ್ದ ತೆಂಗಿನ ತೋಟದಲ್ಲಿದ್ದ ಮರದಿಂದ ಅಚಾನಕ್ ಆಗಿ ತೆಂಗಿನ ಕಾಯಿ ನೇರವಾಗಿ ಮಗುವಿನ ತಲೆಗೆ ಬಿತ್ತು. ಕೂಡಲೇ ಸ್ಥಳೀಯರು ಸೇರಿ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ತಲೆಗೆ ಗಂಭೀರ ಏಟು ಆಗಿದ್ದರಿಂದ ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಮಗು ಕೊನೆಯುಸಿರೆಳೆಯಿತು. ಸಾಮಾನ್ಯವಾಗಿ ಹಿರಿ ಮಗಳನ್ನು ಶಾಲೆಗೆ ಬಿಡುವಾಗ ತಾಯಿಯು ಚಿಕ್ಕಮಗುವನ್ನು ಕರೆದೊಯ್ಯುತ್ತಿರಲಿಲ್ಲ. ಮಳೆ ಬಂದ ಸಂದರ್ಭದಲ್ಲಂತೂ ಕೊಡೆ ಹಿಡಿದುಕೊಂಡು ಹೋಗಬೇಕಿರುವುದರಿಂದ ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಆದರೆ ಅವಘಡ ದಿನದಂದು ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ಮಳೆ ನಿಂತಿತ್ತು. ಆದುದರಿಂದ ಪುಟ್ಟ ಮಗುವನ್ನೂ ಕರೆದುಕೊಂಡು ಹೋಗಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.
ಸ್ಥಳೀಯರ ಪ್ರಯತ್ನ : ಮಗುವಿನ ಮೇಲೆ ತೆಂಗಿನ ಕಾಯಿ ಬಿದ್ದ ಸುದ್ದಿ ತಿಳಿದಾಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರು. ಪಕ್ಕದ ಮನೆಯ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಸ್ಥಳೀಯ ವ್ಯಕ್ತಿ ಮಗುವಿನ ಉಸಿರಾಟಕ್ಕೆ ನೆರವಾಗುವಂತೆ ಸಿಪಿಆರ್ ಮಾಡುತ್ತಾ ಸಾಗಿದರು. ಆಸ್ಪತ್ರೆಗೆ ತಲುಪುವವರೆಗೆ ಮಗು ಕಣ್ಣು ಬಿಟ್ಟು ಆಚೀಚೆ ನೋಡುತ್ತಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ಮನೆಯ ಹತ್ತಿರಕ್ಕೆ ರಸ್ತೆ ಇಲ್ಲ. ಶಾಲಾ ಬಸ್ ಬರುವಲ್ಲಿಗೆ ಸುಮಾರು 250ರಿಂದ 300 ಮೀಟರ್ ನಡೆದುಕೊಂಡು ಹೋಗಬೇಕು. ಮನೆ ದಾಟಿದ ಕೂಡಲೇ 50 ಮೀಟರ್ ದೂರ ತೋಟದಲ್ಲಿ ಸಾಗಿ, ಅನಂತರ ಗದ್ದೆ ಬದಿಯಾಗಿ ರಸ್ತೆ ಇರುವಲ್ಲಿಗೆ ತಲುಪಬೇಕು. ಇಷ್ಟು ಕಡಿಮೆ ಅಂತರ ಸಾಗುವಲ್ಲಿ ಅದೂ ನೇರವಾಗಿ ಕಂಕುಳಲ್ಲಿದ್ದ ಮಗುವಿನ ಮೇಲೆಯೇ ತೆಂಗಿನ ಕಾಯಿ ಬಿದ್ದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಅದೂ ಅಲ್ಲದೆ ಅದು ಒಣಗಿದ ತೆಂಗಿನ ಕಾಯಿಯೂ ಆಗಿರಲಿಲ್ಲ. ಹಸಿ ತೆಂಗಿನ ಕಾಯಿ ಅದು ಹೇಗೆ ಬಿತ್ತು ಎಂಬುದೇ ಗೊತ್ತಾಗುತ್ತಿಲ್ಲ. ತೆಂಗಿನ ಮರ 40 ಅಡಿ ಎತ್ತರವಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕಾಯಿ ಬಿದ್ದ ರಭಸಕ್ಕೆ ತಲೆಯಲ್ಲಿ ಒಂದು ಇಂಚಿನಷ್ಟು ಜಜ್ಜಿದ ಗುಳಿಯಾಗಿತ್ತು.