ಮಂಗಳೂರು, ಜೂ. 13 (DaijiworldNews/TA): ಕರಾವಳಿಯಲ್ಲಿ ನಿರೀಕ್ಷಿತ ಮುಂಗಾರು ಮಳೆ ಕೊರತೆಯಿಂದ ಮೀನುಗಾರಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಮುದ್ರದಲ್ಲಿ ಸಾಕಷ್ಟು ಮಳೆಯಾಗದೇ, ಅಲೆಗಳ ಮಥನ ಉಂಟಾಗದ ಕಾರಣ ಮೀನುಗಳು ಆಳ ಸಮುದ್ರದಲ್ಲೇ ಉಳಿದಿವೆ.

ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿ ಆ ಸಿಹಿನೀರು ಕಡಲಿಗೆ ಸೇರಿದಾಗ ಉಂಟಾಗುವ 'ಸಿಹಿ-ಉಪ್ಪು ನೀರಿನ ಕಾಂಬಿನೇಷನ್' ಹುಡುಕಿಕೊಂಡು ಬಂಗಡೆ, ಚಿಂಡಿಯಂತಹ ಮೀನುಗಳು ದಡದತ್ತ ಓಡಿಬರುತ್ತವೆ. ಆದರೆ ಈ ವರ್ಷ ಮಳೆಯೂ ಇಲ್ಲ, ತೂಫಾನ್ ಕೂಡ ಇಲ್ಲ! ಮೀನುಗಳೆಲ್ಲ ಆಳ ಸಮುದ್ರದಲ್ಲೇ ಲಾಕ್ ಆಗಿವೆ.. ಇದರಿಂದ ಮಂಗಳೂರಿನಿಂದ ಉಳ್ಳಾಲದವರೆಗಿನ ನಾಡದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದು, ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದೆ. ಪರಿಣಾಮವಾಗಿ ಬಂಗುಡೆ ಸೇರಿದಂತೆ ಹಲವು ಮೀನುಗಳ ಬೆಲೆ ಕೆಜಿಗೆ 400 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ.
ಈ ಪರಿಸ್ಥಿತಿ ಮುಂದುವರಿದರೆ ಕರಾವಳಿ ಭಾಗದ ಜನರು ಪಕ್ಕದ ರಾಜ್ಯಗಳಿಂದ ಬರುವ ಐಸ್ ಮೀನುಗಳನ್ನೇ ಅವಲಂಬಿಸಬೇಕಾಗುವ ಅನಿವಾರ್ಯತೆ ಇದೆ. ಹವಾಮಾನ ಇಲಾಖೆ ಕೂಡ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯ ಮುನ್ಸೂಚನೆ ನೀಡಿದ್ದು, ಮೀನುಗಾರರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಮೂಲಗಳ ಪ್ರಕಾರ, ಪೂರ್ಣ ಪ್ರಮಾಣದ ಮೀನುಗಾರಿಕೆ ಶುರುವಾಗಲು ಮೀನುಗಾರರು ಜುಲೈ 1ರವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ. ಪ್ರಕೃತಿಯ ಈ ಮುನಿಸಿಗೆ ಮೀನುಗಾರರು ಅಕ್ಷರಶಃ ನಲುಗಿಹೋಗಿದ್ದಾರೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಮೀನುಗಾರರಿಗೆ ಪರಿಹಾರ ನೀಡದಿದ್ದರೆ, ಕರಾವಳಿಯ ಆರ್ಥಿಕತೆ ತಲೆಕೆಳಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.