ಉಡುಪಿ, ಜೂ. 15 (DaijiworldNews/AA): ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಐತಿಹಾಸಿಕ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಅನಂತ ಅಂಬಾನಿ ಅವರು ತಮ್ಮ ಕುಟುಂಬದ ಗುರೂಜಿಯವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿದ ವೇಳೆ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಅವರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರ ವತಿಯಿಂದ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು.
ಇನ್ನು ಕೊಲ್ಲೂರು ಮೂಕಾಂಬಿಕೆಯ ದರ್ಶನದ ಬಳಿಕ ಅನಂತ್ ಅಂಬಾನಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಉಡುಪಿ ಮಠದ ಆಡಳಿತ ಮಂಡಳಿಯು ಅನಂತ್ ಅಂಬಾನಿ ಅವರನ್ನು ಸ್ವಾಗತಿಸಿತು. ಶ್ರೀ ಕೃಷ್ಣನ ದರ್ಶನದ ಬಳಿಕ ಪರ್ಯಾಯ ಶೀರೂರು ಮಠದ ಶ್ರೀಗಳನ್ನೂ ಅನಂತ್ ಅಂಬಾನಿ ಭೇಟಿಯಾಗಿದ್ದಾರೆ.