ಕಾಸರಗೋಡು, ಜೂ. 15 (DaijiworldNews/TA): ಕೇರಳ ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಪ್ರಿಯದರ್ಶಿನಿಯ ಮಂಜೇಶ್ವರ ಕ್ಷೇತ್ರ ಮಟ್ಟದ ಉದ್ಘಾಟನೆ ಇಂದು ಉಪ್ಪಳದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಎಕೆಎಂ ಅಶ್ರಫ್ ಅವರು ಬಸ್ಗೆ ಧ್ವಜಾರೋಹಣ ಮಾಡಿ ಹಾಗೂ ಡಬಲ್ ಬೆಲ್ ಬಾರಿಸುವ ಮೂಲಕ ಉದ್ಘಾಟಿಸಿದರು.


ಬಸ್ನೊಳಗೆ ಕುಸುಮಾವತಿ ಅವರಿಗೆ ಮೊದಲ ಟಿಕೆಟ್ ವಿತರಿಸಲಾಯಿತು. ನಂತರ ಮೊದಲ ಸಂಚಾರಕ್ಕೆ ಶುಭಕೋರಿ ತೆಂಗಿನಕಾಯಿ ಒಡೆಯಲಾಯಿತು. ಯುಡಿಎಫ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಶಾಸಕ ಅಶ್ರಫ್ ಅವರ ಪ್ರಕಾರ, ಚುನಾವಣೆಗೆ ಮುನ್ನ ಯುಡಿಎಫ್ ನೀಡಿದ್ದ ಇಂದಿರಾ ಗ್ಯಾರಂಟಿ ಭರವಸೆಯ ಭಾಗವಾಗಿರುವ ಈ ಯೋಜನೆಯನ್ನು ಗಡಿಭಾಗದ ಜನರು ವಂಚಿತರಾಗದಂತೆ ಅಂತರರಾಜ್ಯ ಬಸ್ಗಳಿಗೂ ವಿಸ್ತರಿಸಲಾಗಿದೆ.
ಇದರಿಂದ ಮಂಗಳೂರು - ಕಾಸರಗೋಡು ಮಾರ್ಗದ ಫಾಸ್ಟ್ ಪ್ಯಾಸೆಂಜರ್ ಬಸ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಈ ಯೋಜನೆಯಿಂದ ಪ್ರತಿದಿನ ಮಂಗಳೂರು, ಪುತ್ತೂರು ಮತ್ತು ಸುಳ್ಯ ಪ್ರದೇಶಗಳಿಗೆ ಸಂಚರಿಸುವ ಸಾವಿರಾರು ಗಡಿಭಾಗದ ಜನರಿಗೆ ಅನುಕೂಲವಾಗಲಿದೆ. ಕಾರ್ಯಕ್ರಮದಲ್ಲಿ ವಿವಿಧ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.