ಕಾಸರಗೋಡು, ಜೂ. 15 (DaijiworldNews/TA): ಕೇರಳ ಕೆಎಸ್ಆರ್ಟಿಸಿಯ ‘ಪ್ರಿಯದರ್ಶಿನಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಸೋಮವಾರ (ಜೂನ್ 15)ದಿಂದ ಜಾರಿಯಾಗಿದೆ.

ಉಚಿತ ಪ್ರಯಾಣ ಸೌಲಭ್ಯ ಇರುವ ಬಸ್ಗಳನ್ನು ಗುರುತಿಸಲು, ಬಸ್ನ ಮುಂಭಾಗ ಮತ್ತು ಮುಂಭಾಗದ ಬಾಗಿಲಿನ ಬಳಿ “ಪ್ರಿಯದರ್ಶಿನಿ ಮಹಿಳಾ ಉಚಿತ ಪ್ರಯಾಣ” ಎಂಬ ವಿಶೇಷ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ. ಈ ಸ್ಟಿಕ್ಕರ್ ಹೊಂದಿರುವ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೌಲಭ್ಯ ಲಭ್ಯವಿರುತ್ತದೆ.
ಬೆಳಿಗ್ಗೆ 8.30ಕ್ಕೆ ತಿರುವನಂತಪುರದ ತಂಬಾನೂರ್ ಬಸ್ ಟರ್ಮಿನಲ್ನಲ್ಲಿ ಯೋಜನೆಯ ರಾಜ್ಯಮಟ್ಟದ ಉದ್ಘಾಟನೆ ನಡೆದಿದ್ದು, ಬಳಿಕ ರಾಜ್ಯದಾದ್ಯಂತ ಆಯ್ಕೆಯಾದ ಆರ್ಡಿನರಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಯೋಜನೆ ಜಾರಿಯಾಗಿದೆ. ಉದ್ಘಾಟನಾ ಸಂಚಾರ ನಡೆಸುವ ಬಸ್ನ ಚಾಲಕಿ ಹಾಗೂ ನಿರ್ವಾಹಕಿಯೂ ಮಹಿಳೆಯರಾಗಿರುವುದು ವಿಶೇಷ ಎಂದೂ ಹೇಳಲಾಗಿದೆ. ಆದರೆ ಇದು ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಯೋಜನೆಯ ಪ್ರಯೋಜನ ಪಡೆಯಲು ಮಹಿಳೆಯರು ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ವಯೋಮಿತಿ ಇಲ್ಲದೆ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಬಹುದಾಗಿದೆ. ಕಾಸರಗೋಡು ಜಿಲ್ಲೆಯ ಅಂತರರಾಜ್ಯ ಮಾರ್ಗಗಳಲ್ಲೂ ಕೇರಳ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಜಾರಿಯಾಗಿದೆ. ರಾಜ್ಯದಾದ್ಯಂತ ಸುಮಾರು 3,125 ಆರ್ಡಿನರಿ ಬಸ್ಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ.