ಕುಂದಾಪುರ, ಜೂ. 15 (DaijiworldNews/AA): ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗುಜರಾತ್ನ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ತಾಲೂಕಿನ ಲಾಲಾಜಿಬಾಯ್ ಬುದಾಬಾಯ್ ಸೋಲಂಕಿ (37) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 18 ರ ರಾತ್ರಿ ಕುಂದಾಪುರದ ಸಂಗಮ ಜಂಕ್ಷನ್ ಸಮೀಪದ ಮನೆಯೊಂದರ ಬೀಗ ಮುರಿದು ಕಳ್ಳರು 10,000 ರೂಪಾಯಿ ನಗದು ದೋಚಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ಕುಂದಾಪುರದ ವಿನಯ್ ಆಸ್ಪತ್ರೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಬಗ್ಗೆಯೂ ಮತ್ತೊಂದು ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿಳಾಸ ಪತ್ತೆಹಚ್ಚಿ ಗುಜರಾತ್ನ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲಗೆ ತೆರಳಿದ್ದರು. ಅಲ್ಲಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಆತ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮುರುಡೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ ಆರೋಪಿಯು ಕುಂದಾಪುರದಲ್ಲಿ ಮನೆಗಳ್ಳತನ ಮತ್ತು ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ ಕಳುವಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮತ್ತು ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ನಂಜಾನಾಯ್ಕ್ ಎನ್. ಮತ್ತು ಪುಷ್ಪ, ಸಿಬ್ಬಂದಿಗಳಾದ ಮೋಹನ್, ಸಂತೋಷ್, ಪ್ರೀನ್ಸ್, ಮಹಾಬಲ ಶೆಟ್ಟಿಗಾರ್, ಸಂತೋಷ್ ದೇವಾಡಿಗ ಮತ್ತು ಘನಶ್ಯಾಮ್ ಪಾಲ್ಗೊಂಡಿದ್ದರು.