ಮಂಗಳೂರು, ಜೂ. 15 (DaijiworldNews/AK): ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜನಪರ ಹೋರಾಟಗಾರ, ಮಾಜಿ ಪತ್ರಕರ್ತ ಹಾಗೂ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರ ಆಯ್ಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು ಸ್ವಾಗತಿಸಿವೆ ಎಂದು ಅಧ್ಯಕ್ಷರಾದ ಲೋಲಕ್ಷ ರವರು ತಿಳಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಬಡವರು, ಶೋಷಿತರು, ಯುವಜನರು ಹಾಗೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಪಿ.ವಿ. ಮೋಹನ್ ಅವರನ್ನು ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಭೇದ ಮರೆತು ಎಲ್ಲಾ ಶಾಸಕರು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಸಂಘಟನೆಗಳು ಒಕ್ಕೊರಲ ಮನವಿ ಮಾಡಿವೆ.
ರಾಜಕೀಯದಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಾಮಾಜಿಕ ಬದ್ಧತೆಯ ಪ್ರತೀಕವಾಗಿರುವ ಪಿ.ವಿ. ಮೋಹನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ನಾಯಕತ್ವಕ್ಕೆ ಸಂಘಟನೆಗಳು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿವೆ.
ಪಿ.ವಿ. ಮೋಹನ್ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶೋಷಿತ ಸಮುದಾಯಗಳು, ವಿದ್ಯಾರ್ಥಿಗಳು ಹಾಗೂ ಯುವಜನರ ಧ್ವನಿಯಾಗಿ ಕಾರ್ಯನಿರ್ವಹಿಸಲಿದ್ದು, ಜನಪರ ರಾಜಕಾರಣಕ್ಕೆ ಹೊಸ ದಿಕ್ಕು ದೊರೆಯಲಿದೆ ಎಂದು ಸಂಘಟನೆಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರೆನ್ನಿ ಡಿಸೋಜಾ, ಮೋಹಗಂಗಯ್ಯ ಸ್ವಾಮಿ, ಪದ್ಮನಾಭ, ಬಿ. ಬಿ ಹನೀಫ್, ಅಶೋಕ್ ರವರು ಉಪಸ್ಥಿತರಿದ್ದರು.