ಮಂಗಳೂರು, ಜೂ. 16 (DaijiworldNews/AA): ಬಿಸಿಲು ಇದ್ದರೂ, ಮಂಗಳೂರಿನ ಪಣಂಬೂರು ಎನ್ಎನ್ಪಿಟಿ ಸರ್ವಿಸ್ ರಸ್ತೆಯಲ್ಲಿ ಮಳೆನೀರು ನಿಂತಿರುವ ಸಮಸ್ಯೆ ಮಾತ್ರ ಮುಂದುವರೆದಿದೆ. ರಸ್ತೆಯು ಜಲಾವೃತವಾಗಿರುವುದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ.






ಸರ್ವಿಸ್ ರಸ್ತೆಯಲ್ಲಿ ನಿಂತಿರುವ ಈ ನೀರು ನಿತ್ಯ ಸಂಚಾರಿಗಳಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಈ ಭಾಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದರ ನಡುವೆ, ವೇಗವಾಗಿ ಬರುವ ಇತರ ವಾಹನಗಳು ಕೆಸರು ನೀರು ಇತರ ಸವಾರರ ಮೇಲೆ ಹಾರುತ್ತಿದೆ.
ಪಣಂಬೂರು ಮತ್ತು ಸುತ್ತಮುತ್ತಲಿನ ಹೆದ್ದಾರಿ ಪ್ರದೇಶಗಳಲ್ಲಿಯೂ ಇಂತಹದೇ ಮಳೆನೀರು ನಿಲ್ಲುವ ಸಮಸ್ಯೆಗಳು ವರದಿಯಾಗಿವೆ. ನಿತ್ಯ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ರಸ್ತೆಯ ಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ರೀತಿ ರಸ್ತೆಯಲ್ಲಿ ಮಳೆನೀರು ನಿಲ್ಲುವುದು ಅಪಘಾತಗಳ ಆತಂಕ ಹೆಚ್ಚಿಸುತ್ತಿದೆ. ಸಾರ್ವಜನಿಕರ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ರಸ್ತೆ ನಿರ್ವಹಣೆ ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.