ಕುಂದಾಪುರ, ಜೂ. 17 (DaijiworldNews/TA): ಹುಲಿಕಲ್ ಘಾಟಿ ಮೂಲಕ ಬಸ್ ಸಹಿತ ಪ್ರಯಾಣಿಕರು ತೆರಳುವ ಇತರ ವಾಹನ ಮತ್ತು ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಕಾಂಕ್ರೀಟ್ ರಸ್ತೆಯ ಕೆಳಭಾಗದ ಮಣ್ಣು ಕುಸಿದು ಮಾರ್ಗದಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಸದ್ಯ ರಸ್ತೆ ಮಟ್ಟದ ವರೆಗೆ ತಡೆಗೋಡೆ ನಿರ್ಮಿಸಿ, ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ.
ಹಾಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ರಸ್ತೆಯಲ್ಲಿ ಬಸ್ ಸಹಿತ ಪ್ರಯಾಣಿಕರು ತೆರಳುವ ವಾಹನಗಳು, ಲಘು ಗೂಡ್ಸ್ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಈಗಾಗಲೇ ಈ ಬಗ್ಗೆ ಆದೇಶ ನೀಡಿದ್ದು, ಪ್ರಸ್ತುತ ಉಡುಪಿ ಜಿಲ್ಲಾಧಿಕಾರಿಗಳು ಹಿಂದೆ ವಾಹನಗಳ ಸಂಚಾರ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಹೊಸ ಅಧಿಕೃತ ಆದೇಶ ಹೊರಡಿಸಿದ್ದಾರೆ.