ಮಂಗಳೂರು, ಜೂ. 17 (DaijiworldNews/AK): ಜಮೀಯತುಲ್ ಫಲಾಹ್ ಮಂಗಳೂರು ಕಾರ್ಪೊರೇಷನ್ ಘಟಕ ಮತ್ತು ವಿಶೇಷ ಮಕ್ಕಳ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರವಾದ ಸಾನಿಧ್ಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ 'ಈದ್ ಮಿಲನ್ 2026' ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.




ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ಎ. ಗಫೂರ್ ಅವರು ಭಾಗವಹಿಸಿದರು. ತದನಂತರ ಮಾತನಾಡಿದ ಅವರು, ವಿಶೇಷ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯ ರೂಪಿಸುವುದು ಅತ್ಯುತ್ತಮ ಕಾರ್ಯ ಎಂದರು.
ಗೌರವಾನ್ವಿತ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪತ್ರ ಅಧಿಕಾರಿ ಅಕ್ಷತಾ ಶೆಟ್ಟಿ ಹಾಗೂ ಮಾಸ್ ಕ್ಯಾಟರಿಂಗ್ ಸರ್ವಿಸಸ್ನ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಇಕ್ಬಾಲ್ ಅವರು ಉಪಸ್ಥಿತರಿದ್ದರು.
ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶ್ಫಾಕ್ ಅಹ್ಮದ್, ಸಾನಿಧ್ಯ ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಮಾರ್ಲ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದರು.