ಕುಂದಾಪುರ, ಜೂ. 18 (DaijiworldNews/TA): ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆಯೇ ಎಂಬ ಕುರಿತು ಸೂಕ್ಷ್ಮ ಅವಲೋಕನ ಆರಂಭಿಸಿದಾಗಲೇ ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆ ಇಡಲಾಗುತ್ತದೆ ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥನ್ ಹೇಳಿದರು.







ಅವರು ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅರಣ್ಯ ಇಲಾಖೆ ಹಾಗೂ ಶ್ರೀ ಶಾರದಾ ಕಾಲೇಜು ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾನ್ ಡಿಸೋಜ ಅವರಿಗೆ ಗಿಡ ಹಸ್ತಾಂತರಿಸುವ ಮೂಲಕ ಆರ್ಎಫ್ಒ ರಾಘವೇಂದ್ರ ನಾಯ್ಕ್ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮಾತನಾಡಿ, ಹವಾಮಾನ ವೈಪರೀತ್ಯಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ನಮ್ಮ ತಪ್ಪುಗಳ ಪರಿಣಾಮವನ್ನು ಮುಂದಿನ ತಲೆಮಾರು ಅನುಭವಿಸದಂತೆ ಎಚ್ಚರ ವಹಿಸಬೇಕಿದೆ. ಭೂಮಿ, ಸಮುದ್ರ ಹಾಗೂ ಬಾಹ್ಯಾಕಾಶದಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅದರ ಮರುಬಳಕೆ ಮತ್ತು ಸಮರ್ಪಕ ವಿಲೇವಾರಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಸುಭಾಷ್ಚಂದ್ರ ಶೆಟ್ಟಿ ಬಾಂಡ್ಯ, ಶ್ರೀ ಶಾರದಾ ಕಾಲೇಜಿನ ಸಂಚಾಲಕಿ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲ ಡಾ. ದಯಾನಂದ ಎನ್., ಜಿಲ್ಲಾ ಸಂಘದ ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ಜಿಲ್ಲಾ ಸಂಘದ ನಿರ್ದೇಶನದಂತೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 33 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾಂಗಣದ ಸುತ್ತ 33 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶೇಷ ಪರಿಸರ ಅಭಿಯಾನ ನಡೆಸಲಾಯಿತು.