ಮಂಗಳೂರು, ಜೂ. 19 (DaijiworldNews/AA): ಕರಾವಳಿ ಭಾಗದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣಕ್ಕಿಂತ ತುಸು ಕಡಿಮೆಯಿದ್ದರೂ, ಮಂಗಳೂರಿನಲ್ಲಿ ಕಳಪೆ ರಸ್ತೆ ನಿರ್ವಹಣೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳು ಮಾತ್ರ ಮುಂದುವರಿದಿವೆ.



ಪಾದೆಕಲ್ಲಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದ ರಸ್ತೆಯು ಈಗ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ನಿತ್ಯ ಆಡಳಿತ ಕಚೇರಿಗೆ ಕೆಲಸದ ನಿಮಿತ್ತ ಬರುವ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಸರಕಾರಿ ಕೆಲಸ ಕಾರ್ಯಗಳಿಗಾಗಿ ಬರುವ ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಮಂದಿ, ಕೆಸರು ನೀರಲ್ಲೇ ನಡೆದು ಕಚೇರಿಯನ್ನು ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಯ ಈ ದುಸ್ಥಿತಿಯಿಂದ ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ.
ರಸ್ತೆಯ ಅಕ್ಕಪಕ್ಕದಲ್ಲಿ ಸಂಗ್ರಹವಾಗಿರುವ ಮಣ್ಣನ್ನು ತೆರವುಗೊಳಿಸದಿರುವುದು ಮತ್ತು ಮಳೆನೀರು ಹರಿಯುವ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲಕ್ಕೂ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಬಿದ್ದ ಮೊದಲ ಕೆಲವು ಮಳೆಗೇ ರಸ್ತೆ ಜಲಾವೃತಗೊಂಡು ಕೆಸರುಮಯವಾಗಿದ್ದು, ಸಂಚಾರ ಅಯೋಮಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಆಡಳಿತ ಕೇಂದ್ರದ ಕಚೇರಿಯ ಪಕ್ಕದಲ್ಲೇ ಈ ಅವ್ಯವಸ್ಥೆ ಇರುವುದು ವಿಪರ್ಯಾಸದ ಸಂಗತಿ. ರಸ್ತೆಯ ಈ ದುಸ್ಥಿತಿಯ ಬಗ್ಗೆ ಅರಿವಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಮಳೆಗಾಲ ತೀವ್ರಗೊಳ್ಳುವ ಮುನ್ನವೇ ರಸ್ತೆಯನ್ನು ದುರಸ್ತಿಪಡಿಸಿ, ಮಣ್ಣನ್ನು ತೆರವುಗೊಳಿಸಿ ಹಾಗೂ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ತೀವ್ರವಾಗಿ ಒತ್ತಾಯಿಸಿದ್ದಾರೆ.