ಮಂಗಳೂರು, ಜೂ. 20 (DaijiworldNews/AA): ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ವ್ಯಾಪ್ತಿಯ ನಿವಾಸಿಗಳಿಗೆ ಪೂರೈಸಲಾಗುವ ಕುಡಿಯುವ ನೀರನ್ನು ಶುದ್ಧೀಕರಣ ಘಟಕಗಳಲ್ಲಿ ಸಂಸ್ಕರಿಸಿದ ಬಳಿಕವೇ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ರಿನ ಸುರಕ್ಷತೆ ಮತ್ತು ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಾರ್ಡ್ಗಳಲ್ಲಿ ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ ಎಂದು ಎಂಸಿಸಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಡ್ ನಂ. 31ರ ಭಟ್ಟಗುಡ್ಡ 5ನೇ ಕ್ರಾಸ್ ರಸ್ತೆಯ ಕೆಲವು ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ ಎಂಬ ದೂರುಗಳು ಎಂಸಿಸಿಗೆ ಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನೀರಿನ ಪೈಪ್ಲೈನ್ನಲ್ಲಿ ಸೋರಿಕೆ ಇರುವುದು ಕಂಡುಬಂದಿದೆ. ಇದೀಗ ಆ ಸೋರಿಕೆಯನ್ನು ದುರಸ್ತಿಪಡಿಸಲಾಗಿದೆ.
ಎಂಸಿಸಿಯಿಂದ ಸಂಸ್ಕರಿಸಿದ ನೀರನ್ನು ಎಲ್ಲಾ ವಾರ್ಡ್ಗಳಿಗೆ ಪೂರೈಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಎಂಸಿಸಿ ಸಹಾಯವಾಣಿ ಸಂಖ್ಯೆ 0824-2220303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.