ಮಂಗಳೂರು, ಜೂ. 20 (DaijiworldNews/AK): 'ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್' ಆಯೋಜಿಸುತ್ತಿರುವ 9ನೇ ವರ್ಷದ ‘ಭ್ರಾಮರಿ ಯಕ್ಷವೈಭವ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಅಗರಿ ರಾಘವೇಂದ್ರ ರಾವ್ ಅವರು ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.


ಬಳಿಕ ಮಾತನಾಡಿದ ಅವರು, ಭ್ರಾಮರಿ ಯಕ್ಷಮಿತ್ರರು ಟ್ರಸ್ಟ್ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಆತ್ಮೀಯವಾಗಿ ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಯಕ್ಷಗಾನದ ವಿವಿಧ ಶೈಲಿಗಳನ್ನು ಉಳಿಸಿ ಬೆಳೆಸುವಲ್ಲಿ ಈ ಸಂಸ್ಥೆಯ ಪಾತ್ರ ಬಹಳ ದೊಡ್ಡದು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಕಲೆಗೆ ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ಶ್ಲಾಘಿಸಿದರು. ಹಿರಿಯ ಕಲಾವಿದರನ್ನು ಗೌರವಿಸುವ, ನೇಪಥ್ಯ ಕಲಾವಿದರನ್ನು, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಸಂಸ್ಥೆಯನ್ನು ಗುರುತಿಸಿ ಗೌರವಿಸುವ ಸಂಸ್ಥೆಯ ಉದ್ದೇಶ ನಿಜಕ್ಕೂ ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ| ಪ್ರವೀಣ್ ಆಚಾರ್ಯ, ಟ್ರಸ್ಟ್ ನ ರವಿಶಂಕರ್ ಭಟ್ ಉಪಸ್ಥಿತರಿದ್ದರು. ಟ್ರಸ್ಟ್ನ ಸತೀಶ್ ಮಂಜೇಶ್ವರ ಸ್ವಾಗತಿಸಿ, ವಿನಯಕೃಷ್ಣ ಕುರ್ನಾಡು ವಂದಿಸಿದರು.
ಆ.1ರಂದು ಭ್ರಾಮರಿ ಯಕ್ಷವೈಭವ
ಈ ವರ್ಷದ ‘ಭ್ರಾಮರಿ ಯಕ್ಷವೈಭವ‘ ಕಾರ್ಯಕ್ರಮ ಆ.1ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 7ರಿಂದ ಮರುದಿನ ಮುಂಜಾನೆಯವರೆಗೆ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕಲಾವಿದ ಕೆ.ಎಚ್ .ದಾಸಪ್ಪ ರೈ ಅವರಿಗೆ ‘ಭ್ರಾಮರೀ ಯಕ್ಷಮಣಿ‘ ಪ್ರಶಸ್ತಿ, ನೇಪಥ್ಯಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ‘ ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ತೆಂಕುತ್ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಭಾಶಪಥ‘,‘ ಲಕ್ಷ್ಮೀ ಸ್ವಯಂವರ‘,‘ತಾಮ್ರದ್ವಜ ಕಾಳಗ‘ ಎಂಬ ಪೌರಾಣಿಕ ಪ್ರಸಂಗ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟ್ನ ಪತ್ರಿಕಾ ಪ್ರಕಟಣೆ ತಿಳಿಸಿದೆ.